ಚೀನಾದಲ್ಲಿ ಭಾರತದ ಯುದ್ಧನೌಕೆ ಪ್ರದರ್ಶನ (ನೌಕಾಪಡೆಯ 70ನೇ ವಾರ್ಷಿಕೋತ್ಸವದಲ್ಲಿ ಐಎನ್‌ಎಸ್‌ ಕೋಲ್ಕತ್ತ ಭಾಗಿ)

0
383

ಚೀನಾ ನೌಕಾಪಡೆಯ 70ನೇ ವಾರ್ಷಿಕೋತ್ಸವದಲ್ಲಿ ಭಾರತದ ಯುದ್ಧನೌಕೆಗಳಾದ ಐಎನ್‌ಎಸ್‌ ಕೋಲ್ಕತ್ತ ಮತ್ತು ಐಎನ್‌ಎಸ್‌ ಶಕ್ತಿ ಪ್ರದರ್ಶನ ನೀಡಿದವು. ಪಾಕಿಸ್ತಾನದ ಹಡಗುಗಳ ಅನುಪಸ್ಥಿತಿ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು.

ಬೀಜಿಂಗ್‌ (ಪಿಟಿಐ): ಚೀನಾ ನೌಕಾಪಡೆಯ 70ನೇ ವಾರ್ಷಿಕೋತ್ಸವದಲ್ಲಿ ಭಾರತದ ಯುದ್ಧನೌಕೆಗಳಾದ ಐಎನ್‌ಎಸ್‌ ಕೋಲ್ಕತ್ತ ಮತ್ತು ಐಎನ್‌ಎಸ್‌ ಶಕ್ತಿ ಪ್ರದರ್ಶನ ನೀಡಿದವು. ಪಾಕಿಸ್ತಾನದ ಹಡಗುಗಳ ಅನುಪಸ್ಥಿತಿ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು. 

ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಸೇನಾಪಡೆ ಎಂದು ಹೆಸರಾಗಿರುವ ಚೀನಾದ ನೌಕಾಪಡೆ ಆಯೋಜಿಸಿದ್ದ ಈ ಸಮಾರಂಭದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಯುದ್ಧನೌಕೆಗಳು ಪ್ರದರ್ಶನ ನೀಡಿದವು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ನೆರವಿನಿಂದ ಬ್ರಹ್ಮೋಸ್‌ ಕ್ಷಿಪಣಿ ವಾಹಕವಾಗಿರುವ ಐಎನ್‌ಎಸ್‌ ಕೋಲ್ಕತ್ತವನ್ನು ವೈರಿಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ಬಳಸಲಾಗುತ್ತದೆ. ಕ್ಯಾಪ್ಟನ್‌ ಆದಿತ್ಯ ಹರ ನೇತೃತ್ವದಲ್ಲಿ ಈ ಸಮರನೌಕೆಯು ಪ್ರದರ್ಶನ ನೀಡಿತು. 

ಪಾಕ್‌ ಗೈರು: ಚೀನಾದ ಪರಮಾಪ್ತ ರಾಷ್ಟ್ರವಾಗಿರುವ ಪಾಕಿಸ್ತಾನದ ಹಡಗುಗಳ ಪ್ರದರ್ಶನದಲ್ಲಿ ಪಾಲ್ಗೊಂಡಿರಲಿಲ್ಲ. ಪುಲ್ವಮಾ ದಾಳಿ ನಂತರ ಭಾರತ–ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿರುವ ಕಾರಣ ತನ್ನ ಸಮರನೌಕೆಗಳನ್ನು ಪ್ರದರ್ಶನಕ್ಕೆ ಕಳುಹಿಸಿಲ್ಲ ಎಂದು ಪಾಕಿಸ್ತಾನ ನೌಕಾಪಡೆ ಹೇಳಿಕೆ ನೀಡಿದೆ. 

ಚೀನಾದಿಂದ ಶಸ್ತ್ರಾಸ್ತ್ರ ಮತ್ತು ಯುದ್ಧೋಪಕರಣಗಳನ್ನು ಪಡೆಯುವ ಪ್ರಮುಖ ರಾಷ್ಟ್ರ ಪಾಕಿಸ್ತಾನ. ಸದ್ಯ, ಚೀನಾವು ನಾಲ್ಕು ಸಣ್ಣ ಯುದ್ಧನೌಕೆಗಳನ್ನು ಪಾಕಿಸ್ತಾನಕ್ಕಾಗಿ ಸಿದ್ಧಗೊಳಿಸುತ್ತಿದೆ. 

ಅಮೆರಿಕ ಕೂಡ ಯಾವುದೇ ಯುದ್ಧನೌಕೆಗಳನ್ನು ಪ್ರದರ್ಶನಕ್ಕೆ ಕಳುಹಿಸಿಲ್ಲ. ವಿಶ್ವದ 13 ದೇಶಗಳ 18 ಸಮರನೌಕೆಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.