ಚಿನ್ನದ ಆಮದು ಶೇ 5.5ರಷ್ಟು ಇಳಿಕೆ

0
386

ದೇಶದ ಚಿನ್ನದ ಆಮದು ಪ್ರಮಾಣವು ಏಪ್ರಿಲ್‌–ಫೆಬ್ರುವರಿಯಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ನವದೆಹಲಿ (ಪಿಟಿಐ): ದೇಶದ ಚಿನ್ನದ ಆಮದು ಪ್ರಮಾಣವು ಏಪ್ರಿಲ್‌–ಫೆಬ್ರುವರಿಯಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಮೌಲ್ಯದ ಲೆಕ್ಕದಲ್ಲಿ  2.03 ಲಕ್ಷ ಕೋಟಿಗಳಷ್ಟು ಚಿನ್ನ ಆಮದಾಗಿದೆ. 2017–18ರ ಏಪ್ರಿಲ್‌–ಫೆಬ್ರುವರಿಯಲ್ಲಿ ಈ ಮೊತ್ತ  2.15 ಲಕ್ಷ ಕೋಟಿಗಳಷ್ಟಾಗಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ಆಮದು ತಗ್ಗಿರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.

2018ರ ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳುಗಳಲ್ಲಿ ಚಿನ್ನದ ಆಮದು ನಕಾರಾತ್ಮಕ ಪ್ರಗತಿ ಕಂಡಿತ್ತು. 2019ರ ಜನವರಿಯಲ್ಲಿ ಶೇ 38.16ರಷ್ಟು ಹೆಚ್ಚಾಗಿತ್ತು. ಆದರೆ ಫೆಬ್ರುವರಿಯಲ್ಲಿ ಶೇ 10.8ರಷ್ಟು ಇಳಿಕೆ ಕಂಡಿತು.

ಹರಳು ಮತ್ತು ಚಿನ್ನಾಭರಣ ರಫ್ತು ಶೇ 6.3ರಷ್ಟು ಇಳಿಕೆಯಾಗಿದ್ದು,  1.96 ಲಕ್ಷ ಕೋಟಿಗಳಷ್ಟಾಗಿದೆ.

ವಿದೇಶಿ ವಿನಿಮಯದ ಒಳಹರಿವು ಮತ್ತು ಹೊರಹರಿವಿನ ನಡುವಣ ಅಂತರವಾದ ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ಶೇ 1.1 ರಿಂದ 
ಶೇ 2.9ಕ್ಕೆ ಏರಿಕೆಯಾಗಿದೆ. ಚಿನ್ನಾಭರಣ ರಫ್ತು ಹೆಚ್ಚಿಸಲು ಚಿನ್ನದ ಮೇಲಿನ ಆಮದು ಸುಂಕ ತಗ್ಗಿಸುವಂತೆ ಮತ್ತು ಸುಲಭವಾಗಿ ಚಿನ್ನ ಲಭ್ಯವಾಗುವಂತೆ ಮಾಡಲು ನಿಯಮಗಳನ್ನು ಸಡಿಲಿಸಬೇಕು ಎನ್ನುವುದು ದೇಶಿ ಚಿನ್ನಾಭರಣ ಉದ್ಯಮದ ಬೇಡಿಕೆಯಾಗಿದೆ.