ಚಾರುಕೀರ್ತಿ ಭಟ್ಟಾಚಾರ್ಯರಿಗೆ ಮಹಾವೀರ ಶಾಂತಿ ಪ್ರಶಸ್ತಿ

0
15

ಶ್ರವಣ ಬೆಳಗೊಳ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಅವರನ್ನು 2017ನೇ ಸಾಲಿನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

44 ವರ್ಷಗಳಿಂದ ಶ್ರವಣ ಬೆಳಗೊಳದ ಮಠದ ಪೀಠಾಧ್ಯಕ್ಷರಾಗಿ ಜನಹಿತ ಮತ್ತು ಆಧ್ಯಾತ್ಮಿಕ ಕೈಂಕರ್ಯದಲ್ಲಿ ತೊಡಗಿರುವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಶ್ರವಣ ಬೆಳಗೊಳದಲ್ಲಿ ಪ್ರಾಕೃತ ಅಧ್ಯಯನನ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅನ್ನದಾಸೋಹ ಮತ್ತು ಜ್ಞಾನದಾಸೋಹ ಎರಡನ್ನೂ ನಡೆಸುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದ್ದಾರೆ. ಧಾರ್ಮಿಕ ಸಭೆಗಳ ಜತೆ ಸಾಹಿತ್ಯ ಸಭೆಗಳನ್ನೂ ಆಯೋಜಿಸಿದ್ದಾರೆ. ಮಠವನ್ನು ಸಾಮಾಜಮುಖಿಯಾಗಿ ನಡೆಸುವಲ್ಲಿ ಶ್ರಮಿಸಿದ್ದಾರೆ.

ಪ್ರಶಸ್ತಿಯು ₹10 ಲಕ್ಷ ನಗದು, ಸ್ಮರಣಿಕೆ ಹಾಗೂ ಫಲಕಗಳನ್ನು ಒಳಗೊಂಡಿದೆ. ಹಿರಿಯ ಸಾಹಿತಿ ಜಿನದತ್ತ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಸಮಿಯು ಈ ಆಯ್ಕೆ ಮಾಡಿದೆ. ಈ ಪ್ರಶಸ್ತಿಯನ್ನು ಮಹಾವೀರ ಜಯಂತಿಯ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಾನಪದ ಶ್ರೀ ಪ್ರಶಸ್ತಿ ಎರಡಕ್ಕೆ ಹೆಚ್ಚಳ
ಜಾನಪದ ಕ್ಷೇತ್ರದದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾಗುವ ಜಾನಪದ ಶ್ರೀ ಪ್ರಶಸ್ತಿಯನ್ನು ಪ್ರತಿ ವರ್ಷ ಒಬ್ಬರಿಗೆ ನೀಡಲಾಗುತ್ತಿತ್ತು. ಜಾನಪದ ಕ್ಷೇತ್ರದ ವೈಶಾಲ್ಯತೆಯನ್ನು ಗಮನದಲ್ಲಿಸಿರಿಕೊಂಡು ಈ ಪ್ರಶಸ್ತಿ ಸಂಖ್ಯೆಯನ್ನು ಪ್ರಸಕ್ತ ವರ್ಷದಿಂದ ಎರಡಕ್ಕೆ ಹೆಚ್ಚಿಸಲಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ.

ಡಿ.11ಕ್ಕೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ. 11ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಅಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.