ಚಾಬಹಾರ್​ ಬಂದರಿನ ಮೊದಲ ಹಂತ ಲೋಕಾರ್ಪಣೆ

0
27

ಚೀನಾ ಮತ್ತು ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಇರಾನ್​ ಸಹಭಾಗಿತ್ವದಲ್ಲಿ ಭಾರತ ಅಭಿವೃದ್ಧಿ ಪಡಿಸುತ್ತಿರುವ ಚಾಬಹಾರ್​ ಬಂದರಿನ ಮೊದಲ ಹಂತವನ್ನು ಇರಾನ್​ ಅಧ್ಯಕ್ಷ ಹಸನ್​ ರೌಹನಿ ಭಾನುವಾರ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಭಾರತ, ಆಫ್ಘಾನಿಸ್ತಾ, ಕತಾರ್​, ಪಾಕಿಸ್ತಾನ ಮತ್ತು ಇತರ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಚಾಬಹಾರ್​ ಬಂದರು ಲೋಕಾರ್ಪಣೆಗೊಂಡಿರುವುದರಿಂದ ಮದ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಭಾರತಕ್ಕೆ ನೆರವಾಗಲಿದೆ. ಜತೆಗೆ ಆಫ್ಘಾನಿಸ್ತಾನಕ್ಕೆ ಅಗತ್ಯ ಸರಕುಗಳನ್ನು ರವಾನಿಸಲು ಸಾಧ್ಯವಾಗಲಿದೆ. ಹಾಗಾಗಿ ಈ ಬಂದರಿನ ಅಭಿವೃದ್ಧಿಗಾಗಿ ಭಾರತ 500 ಮಿಲಿಯನ್​ ಡಾಲರ್​ ಹೂಡಿಕೆ ಮಾಡುತ್ತಿದೆ.

ಪ್ರಸ್ತುತ ಚಾಬಹಾರ್​ ಬಂದು ವಾರ್ಷಿಕ 2.5 ಮಿಲಿಯನ್​ ಟನ್​ ಸರಕನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಅಭಿವೃದ್ಧಿ ಹೊಂದಿದ ಬಳಿಕ ವಾರ್ಷಿಕ 8.5 ಮಿಲಿಯನ್​ ಟನ್​ ಸರಕನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ.

ಭಾರತ ಕಳೆದ ತಿಂಗಳು ಚಾಬಹಾರ್​ ಬಂದರಿನ ಮೂಲಕ ಆಫ್ಘಾನಿಸ್ತಾನಕ್ಕೆ ಗೋಧಿಯನ್ನು ರವಾನಿಸಿತ್ತು. ಈ ಮೂಲಕ ಪಾಕಿಸ್ತಾನವನ್ನು ಅವಲಂಬಿಸದೆ ಆಫ್ಘನ್​ಗೆ ಸರಕು ರವಾನಿಸುವ ಹೊಸ ಮಾರ್ಗವನ್ನು ಕಂಡು ಕೊಂಡಿತ್ತು. ಭಾರತ ಮುಂದಿನ ದಿನಗಳಲ್ಲಿ ಚಾಬಹಾರ್​ ಮೂಲಕ 1,30,000 ಟನ್​ ಸರಕನ್ನು ಆಫ್ಘಾನಿಸ್ತಾನಕ್ಕೆ ರವಾನಿಸಲಿದೆ.