ಚಂದ್ರಯಾನ–3ಕ್ಕೆ ಇಸ್ರೊ ಸಿದ್ಧತೆ

0
8

ಚಂದ್ರನ ಅಂಗಳದ ಮೇಲೆ ಲ್ಯಾಂಡರ್‌ ಇಳಿಸುವಲ್ಲಿ ಕೊನೆ ಗಳಿಗೆಯಲ್ಲಿ ವಿಫಲವಾಗಿದ್ದ ಇಸ್ರೊ, ಚಂದ್ರಯಾನ–3 ಮೂಲಕ ಮತ್ತೊಮ್ಮೆ ಲ್ಯಾಂಡರ್‌ ಮತ್ತು ರೋವರ್‌ ಇಳಿಸುವ ಸಾಹಸಕ್ಕೆ ಕೈಹಾಕಲಿದೆ.

ಬೆಂಗಳೂರು: ಚಂದ್ರನ ಅಂಗಳದ ಮೇಲೆ ಲ್ಯಾಂಡರ್‌ ಇಳಿಸುವಲ್ಲಿ ಕೊನೆ ಗಳಿಗೆಯಲ್ಲಿ ವಿಫಲವಾಗಿದ್ದ ಇಸ್ರೊ, ಚಂದ್ರಯಾನ–3 ಮೂಲಕ ಮತ್ತೊಮ್ಮೆ ಲ್ಯಾಂಡರ್‌ ಮತ್ತು ರೋವರ್‌ ಇಳಿಸುವ ಸಾಹಸಕ್ಕೆ ಕೈಹಾಕಲಿದೆ.

ಎಲ್ಲವೂ ಅಂದು ಕೊಂಡಂತೆ ನಡೆದರೆ 2020 ರ ನವೆಂಬರ್‌ನಲ್ಲಿ ಚಂದ್ರನ ಮೇಲೆ ಲ್ಯಾಂಡರ್‌  ಇಳಿಸಲಾ ಗುವುದು. ಈ ಸಂಬಂಧ ಪೂರ್ವಭಾವಿ ಕೆಲಸಗಳನ್ನು ಆರಂಭಿಸಲಾಗಿದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.

ಈ ಸಂಬಂಧ ಉನ್ನತ ಮಟ್ಟದ ಸಮಿತಿಗಳು ಮತ್ತು ಉಪಸಮಿತಿಗಳನ್ನೂ ರಚಿಸಲಾಗಿದೆ. ಕಳೆದ ಅಕ್ಟೋಬರ್‌ನಿಂದ ಈ ಸಮಿತಿಗಳು ಹಲವು ಸಭೆಗಳನ್ನು ನಡೆಸಿವೆ. ಹೊಸ ಯಾನದಲ್ಲಿ ಲ್ಯಾಂಡರ್‌ ಮತ್ತು ರೋವರ್‌ಗೆ ಮಾತ್ರ ಹೆಚ್ಚಿನ ಒತ್ತು ನೀಡಲಾಗಿದೆ. ಚಂದ್ರಯಾನ–2 ರ ಆರ್ಬಿಟರ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹೊಸ ಯೋಜನೆಯಲ್ಲಿ ಆರ್ಬಿಟರ್‌ಗೆ ಹೆಚ್ಚು ಒತ್ತು ನೀಡದಿರಲು ನಿರ್ಧರಿಸಲಾಗಿದೆ.

ಚಂದ್ರಯಾನ–3 ರ ರೋವರ್‌ನಲ್ಲಿ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದಂತೆ ಯಾವ ಯಾವ ಸಾಧನಗಳನ್ನು ಅಳವಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಮುಖ್ಯವಾಗಿ ಲ್ಯಾಂಡರ್‌ ಅನ್ನು ಇಳಿಸಬೇಕಾದ ಪ್ರದೇಶದ ಆಯ್ಕೆ, ನ್ಯಾವಿಗೇಷನ್‌ ಸೇರಿದಂತೆ ಹಲವು ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ಲ್ಯಾಂಡರ್‌ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಉದ್ದೇಶಿಸಲಾಗಿದೆ. ಹೆಚ್ಚು ವೇಗದಲ್ಲಿ ಲ್ಯಾಂಡಿಂಗ್‌ ಆಗುವ ಸಂದರ್ಭ ಬಂದರೂ ಯಾವುದೇ ಹಾನಿ ಆಗದಿರುವಂತೆ ವ್ಯವಸ್ಥೆ ಮಾಡಲಾಗುವುದು. ಲ್ಯಾಂಡರ್‌ ಮತ್ತು ರೋವರ್‌ ಅನ್ನು ಇಸ್ರೊ ನಿರ್ಮಿಸಲಿದೆ.