ಚಂದ್ರಯಾನ–2 ನೌಕೆಯನ್ನು ಭೂಕಕ್ಷೆಗೆ ಸೇರಿಸಿದ ರಾಕೆಟ್‌

0
89

ಭಾರತವು ಚಂದ್ರನ ಅನ್ವೇಷಣೆಯಲ್ಲಿ ಹೊಸತೊಂದು ಭಾಷ್ಯ ಬರೆಯಲು ಸಜ್ಜಾಗಿದೆ. ‘ಕೋಟ್ಯಂತರ ಕನಸುಗಳನ್ನು ಚಂದ್ರನಲ್ಲಿಗೆ ತಲುಪಿಸುವ ಮಹತ್ವಾಕಾಂಕ್ಷೆ’ಯ ಚಂದ್ರಯಾನ–2ರ ಉಡ್ಡಯನವು ಜುಲೈ 22 ರ ಸೋಮವಾರ ಯಶಸ್ವಿಯಾಗಿ ನಡೆದಿದೆ.

ಶ್ರೀಹರಿಕೋಟಾ (ಪಿಟಿಐ): ಭಾರತವು ಚಂದ್ರನ ಅನ್ವೇಷಣೆಯಲ್ಲಿ ಹೊಸತೊಂದು ಭಾಷ್ಯ ಬರೆಯಲು ಸಜ್ಜಾಗಿದೆ. ‘ಕೋಟ್ಯಂತರ ಕನಸುಗಳನ್ನು ಚಂದ್ರನಲ್ಲಿಗೆ ತಲುಪಿಸುವ ಮಹತ್ವಾಕಾಂಕ್ಷೆ’ಯ ಚಂದ್ರಯಾನ–2ರ ಉಡ್ಡಯನವು ಜುಲೈ 22 ರ ಸೋಮವಾರ ಯಶಸ್ವಿಯಾಗಿ ನಡೆದಿದೆ. ಈವರೆಗೆ ಯಾರೂ ಶೋಧ ನಡೆಸಿಲ್ಲದ ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ಯೋಜನೆಯ ಮೊದಲ ಘಟ್ಟವು ಯಶಸ್ಸು ಕಂಡಿದೆ.

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅತ್ಯಂತ ಬಲಶಾಲಿ ರಾಕೆಟ್‌, ‘ಬಾಹುಬಲಿ’ ಎಂದೇ ಮೆಚ್ಚಿನಿಂದ ಕರೆಯಲಾಗುವ ಜಿಎಸ್‌ಎಲ್‌ವಿ ಮಾರ್ಕ್‌–3 ಮಧ್ಯಾಹ್ನ 2.43ಕ್ಕೆ ಚಂದ್ರನತ್ತ ನೆಗೆಯಿತು. ಉಡ್ಡಯನವಾಗಿ ಸರಿಯಾಗಿ 16 ನಿಮಿಷ 14 ಸೆಕೆಂಡ್‌ಗಳಲ್ಲಿ ಚಂದ್ರಯಾನ–23,850 ಕೆ.ಜಿ. ತೂಕದ ಉಪಕರಣಗಳನ್ನು ‘ಬಾಹುಬಲಿ’ಯು ಭೂಮಿಯ ಕಕ್ಷೆಗೆ ಸೇರಿಸಿತು. ಸೋಮವಾರದ ಉಡ್ಡಯನವು ಕರಾರುವಾಕ್ಕಾಗಿಯೇ ನಡೆಯಿತು.

‘ಚಂದ್ರಯಾನ–2 ಕೋಟ್ಯಂತರ ಕನಸುಗಳನ್ನು ಚಂದ್ರನತ್ತ ಒಯ್ಯಲು ಸಜ್ಜಾಗಿದೆ. ಈಗ ಹಿಂದೆಂದಿಗಿಂತಲೂ ಬಲಶಾಲಿಯಾಗಿದೆ. ಸೋಮವಾರ  ಜುಲೈ 22ರಂದು ಮಧ್ಯಾಹ್ನ 2.43ರ ಉಡ್ಡಯನಕ್ಕೆ ನಮ್ಮೊಂದಿಗೆ ಸೇರಿಕೊಳ್ಳಿ’ ಎಂದು ಉಡ್ಡಯನದ ದಿನಾಂಕವನ್ನು ಇದೇ ಜುಲೈ 18ರಂದು ಪ್ರಕಟಿಸಿದಾಗ ಇಸ್ರೊ ಟ್ವೀಟ್‌ ಮಾಡಿತ್ತು.
 
ಇದೇ ಜುಲೈ 15 ರಂದು ನಿಗದಿಯಾಗಿದ್ದ ಉಡ್ಡಯನವನ್ನು ತಾಂತ್ರಿಕ ತೊಂದರೆಯ ಕಾರಣಕ್ಕೆ ಕೆಲವೇ ನಿಮಿಷಗಳ ಮೊದಲು ರದ್ದು ಮಾಡಲಾಗಿತ್ತು. ಹಾಗಾಗಿ ಮರುನಿಗದಿಯಾದ ದಿನಾಂಕದಂದು ಕಾರ್ಯಾಚರಣೆ ಯಶಸ್ವಿಯಾದದ್ದು ಇಸ್ರೊದ ವಿಜ್ಞಾನಿಗಳಲ್ಲಿ ನಿರಾಳ ಭಾವದ ಜತೆಗೆ ಭಾರಿ ಸಂಭ್ರಮವನ್ನೂ ಮೂಡಿಸಿದೆ.
 
ಚಂದ್ರಯಾನ–2 ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಬಹುದೊಡ್ಡ ನೆಗೆತ. ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರ ಹೆಸರನ್ನು ಹೊತ್ತ ‘ವಿಕ್ರಂ’ ರೋವರ್‌ ಅನ್ನು ಸುರಕ್ಷಿತವಾಗಿ ಇಳಿಸಲು ಇಸ್ರೊಕ್ಕೆ ಸಾಧ್ಯವಾದರೆ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
 
ಚಂದ್ರನತ್ತ ಭಾರತದ ಚಾರಿತ್ರಿಕ ಯಾನದ ಆರಂಭ ಇದು ಎಂದು ಇಸ್ರೊ ಮುಖ್ಯಸ್ಥ ಕೆ.ಶಿವನ್‌ ಉಡ್ಡಯನದ ಯಶಸ್ಸಿನ ಬಳಿಕ ಹೇಳಿದರು. ‘ಈ ಮೊದಲು ಕಾಣಿಸಿಕೊಂಡಿದ್ದ ತಾಂತ್ರಿಕ ತೊಂದರೆಯನ್ನು ನಾವೀಗ ಮೆಟ್ಟಿ ನಿಂತಿದ್ದೇವೆ’ ಎಂದರು. 
 
‘ಮುಂದಿನ ಒಂದೂವರೆ ತಿಂಗಳಲ್ಲಿ ಉಪಗ್ರಹವನ್ನು ಚಂದ್ರನ ಕಕ್ಷೆಗೆ ತರುವ ಮೊದಲು 15 ಅತ್ಯಂತ ನಿರ್ಣಾಯಕ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕಿದೆ. ಅದಾದ ಬಳಿಕ, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಮತ್ತು ವಿಕ್ರಂ ರೋವರ್‌ ಅನ್ನು ಸುರಕ್ಷಿತವಾಗಿ ಇಳಿಸುವ 15 ನಿಮಿಷಗಳು ನಮಗೆ ರೋಚಕ ಅನುಭವ ಉಂಟು ಮಾಡಲಿದೆ’ ಎಂದು ಶಿವನ್‌ ಉಡ್ಡಯನಕ್ಕೆ ಮೊದಲು ಹೇಳಿದ್ದರು.  11 ವರ್ಷಗಳ ಹಿಂದೆ 2008ರಲ್ಲಿ ಉಡ್ಡಯನ ಮಾಡಲಾದ ಚಂದ್ರಯಾನ–1ರ ಯಶಸ್ಸಿನ ಬಳಿಕ ಈಗ ಇಸ್ರೊದ ಜೈತ್ರಯಾತ್ರೆ ಮುಂದುವರಿದಿದೆ. ಮೊದಲ ಚಂದ್ರಯಾನವು ಇತಿಹಾಸ ಸೃಷ್ಟಿಸಿತ್ತು. ಉಪಗ್ರಹವು ಚಂದ್ರನಿಗೆ 3,400 ಬಾರಿ ಸುತ್ತು ಬಂದಿತ್ತು. 2009ರ ಆಗಸ್ಟ್‌ 29ರವರೆಗೆ ಅಂದರೆ 312 ದಿನ ಕಾರ್ಯಾಚರಣೆ ನಡೆಸಿತ್ತು. 
 
ಚಂದ್ರಯಾನ–2ರಲ್ಲಿ ಮೂರು ಘಟಕಗಳಿವೆ. ಕಕ್ಷೆಗಾಮಿ (ಚಂದ್ರನ ಸುತ್ತ ಸುತ್ತುವ ನೌಕೆ), ವಿಕ್ರಮ್‌ ಲ್ಯಾಂಡರ್‌ (ಚಂದ್ರನಲ್ಲಿ ಸುರಕ್ಷಿತವಾಗಿ ಇಳಿಯುವ ನೌಕೆ) ಮತ್ತು ಪ್ರಜ್ಞಾನ್‌ ರೋವರ್‌ (ಚಂದ್ರನ ಮೇಲೆ ಚಲಿಸಿ ದತ್ತಾಂಶ ಸಂಗ್ರಹಿಸುವ ನೌಕೆ) ಚಂದ್ರಯಾನ–2ರ ಮೂರು ಭಾಗಗಳು. 
 
ಈ ಬಾರಿಯ ಕಾರ್ಯಾಚರಣೆಯು ಇಸ್ರೊದ ಇತಿಹಾಸದಲ್ಲಿಯೇ ಅತ್ಯಂತ ಸಂಕೀರ್ಣವಾದುದು. ಇಂತಹ ಕಾರ್ಯಾಚರಣೆಯಲ್ಲಿ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ಈವರೆಗೆ ಯಶಸ್ಸು ಪಡೆದಿವೆ.  ಚಂದ್ರಯಾನದಲ್ಲಿ ಒಟ್ಟು 13 ಉಪಕರಣಗಳಿವೆ. ಅವುಗಳಲ್ಲಿ ಐದು ಯುರೋಪ್‌ನದ್ದಾದರೆ, ಎರಡು ಅಮೆರಿಕ ಮತ್ತು ಒಂದು ಬಲ್ಗೇರಿಯಾದ್ದಾಗಿವೆ.
 
ಇಸ್ರೊ ನಡೆಸುವ ಅಧ್ಯಯನ ಚಂದ್ರನ ಬಗೆಗಿನ ನಮ್ಮ ತಿಳಿವಳಿಕೆಯನ್ನು ಉತ್ತಮಪಡಿಸಲಿದೆ. ಮಾತ್ರವಲ್ಲದೆ, ಭಾರತ ಮತ್ತು ಮಾನವ ಕುಲಕ್ಕೆ ಪ್ರಯೋಜನಕಾರಿ ಆಗುವ ಹೊಸ ಶೋಧಕ್ಕೂ ದಾರಿ ಮಾಡಿಕೊಡಬಲ್ಲುದು. 
 
ಕುತೂಹಲದ ಗಣಿ
 
ಚಂದ್ರನ ದಕ್ಷಿಣ ಧ್ರುವವು ಬಹಳ ಆಸಕ್ತಿದಾಯಕ ಪ್ರದೇಶ. ಉತ್ತರ ಧ್ರುವಕ್ಕೆ ಹೋಲಿಸಿದರೆ ಈ ಪ್ರದೇಶವು ನೆರಳಿನಲ್ಲಿರುವುದೇ ಹೆಚ್ಚು. ಈ ಪ್ರದೇಶದಲ್ಲಿ ನೀರಿನ ಅಂಶ ಇರುವ ಸಾಧ್ಯತೆ ಹೆಚ್ಚು ಎಂದು ಇಸ್ರೊ ಅಂದಾಜಿಸಿದೆ. ಜತೆಗೆ, ದಕ್ಷಿಣ ಧ್ರುವದಲ್ಲಿ ಶೀತ ‍ಪ್ರದೇಶಗಳಿವೆ. ಹಾಗಾಗಿ, ಸೌರ ವ್ಯೂಹ ಸೃಷ್ಟಿಯ ಆರಂಭಿಕ ಪಳೆಯುಳಿಕೆ ದಾಖಲೆ ಅಲ್ಲಿ ಸಿಗಬಹುದು ಎಂಬ ನಿರೀಕ್ಷೆಯಿದೆ.