ಚಂದ್ರಯಾನ–2’ ಏಪ್ರಿಲ್‌ನಲ್ಲಿ ಮುಹೂರ್ತ (2021ರ ಡಿಸೆಂಬರ್‌ನಲ್ಲಿ ‘ಗಗನಯಾನ’ ನೌಕೆ ಉಡಾವಣೆ)

0
570

ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಇಳಿಸುವ ಬಹು ನಿರೀಕ್ಷಿತ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆಯ ಉಡಾವಣೆ ಇದೇ ಏಪ್ರಿಲ್‌ನಲ್ಲಿ ನಡೆಯಲಿದೆ.

ಬೆಂಗಳೂರು: ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಇಳಿಸುವ ಬಹು ನಿರೀಕ್ಷಿತ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆಯ ಉಡಾವಣೆ ಇದೇ 2019 ರ ಏಪ್ರಿಲ್‌ನಲ್ಲಿ ನಡೆಯಲಿದೆ.

ಬಾಹ್ಯಾಕಾಶಕ್ಕೆ ಮಾನವನನ್ನು ಕಳಿಸುವ ‘ಗಗನಯಾನ’ ನೌಕೆ ಉಡಾವಣೆ 2021ರ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಜನೇವರಿ 11 ರ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಚಂದ್ರಯಾನ–2 ಇದೇ ಮಾರ್ಚ್‌ 25ಕ್ಕೆ ಉಡಾವಣೆ ಮಾಡುವುದಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಕೆಲವು ಪರೀಕ್ಷೆಗಳು ಅಂತಿಮಗೊಂಡಿಲ್ಲ. ಮಾರ್ಚ್‌– ಏಪ್ರಿಲ್‌ ವೇಳೆಗೆ ಈ ಪರೀಕ್ಷೆಗಳು ಮುಗಿಯಲಿವೆ. ಏಪ್ರಿಲ್‌ ಕೊನೆಯೊಳಗೆ ಉಡಾವಣೆ ಆಗುವುದು ಖಚಿತ. ಒಂದು ವೇಳೆ ಆಗಲೂ ಸಮಯ 
ಕೂಡಿ ಬರದಿದ್ದರೆ, ಜೂನ್‌ಗೆ ಮುಂದೂಡಬೇಕಾಗಬಹುದು ಎಂದು ಶಿವನ್‌ ಹೇಳಿದರು.

‘ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸಲಾಗುವುದು. ಯಾವುದೇ ದೇಶ ಈವರೆಗೂ ದಕ್ಷಿಣ ಧ್ರುವ ಪ್ರದೇಶದತ್ತ ಗಮನಹರಿಸಿಲ್ಲ. ಅಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಇಳಿಸುವ ಮೂಲಕ ನಾವು ಇತಿಹಾಸ ಸೃಷ್ಟಿಸುವುದು ಖಚಿತ. ಏಕೆಂದರೆ, ಅಲ್ಲಿ ನೀರು ಇರುವ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ’ 
ಎಂದರು.

‘ಲೋಕಸಭಾ ಚುನಾವಣೆಗೂ ಏಪ್ರಿಲ್‌ನಲ್ಲಿ ನಡೆಯುವ ಚಂದ್ರಯಾನ–2 ನೌಕೆಯ ಉಡಾವಣೆಗೂ ಸಂಬಂಧವಿಲ್ಲ. ನಮ್ಮ ಮೇಲೆ ಯಾರೂ ಯಾವುದೇ ರೀತಿಯ ಒತ್ತಡವನ್ನು ಹಾಕಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗಗನಯಾನ’ಕ್ಕೆ ಒಬ್ಬ ಮಹಿಳೆ: ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ‘ಗಗನಯಾನ’ದಲ್ಲಿ ಒಬ್ಬ ಮಹಿಳೆಯೂ ಇರುತ್ತಾರೆ. ಗಗನಯಾತ್ರಿಗಳನ್ನು ಭಾರತೀಯ ವಾಯುಪಡೆ ಆಯ್ಕೆ ಮಾಡಲಿದೆ. ಇವರಿಗೆ 
ಆರಂಭಿಕ ತರಬೇತಿಯನ್ನು ಭಾರತದಲ್ಲಿ, ಮುಂದುವರಿದ ತರಬೇತಿಯನ್ನು ರಷ್ಯಾದಲ್ಲಿ ನೀಡಲಾಗುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಏಳು ದಿನಗಳು ಇರುತ್ತಾರೆ ಎಂದು ಶಿವನ್‌ ತಿಳಿಸಿದರು.