ಚಂದ್ರನ ಮೇಲೆ ಇಳಿದ ಚೀನಾದ ನೌಕೆ

0
774

ಅಮೆರಿಕಕ್ಕೆ ಸೆಡ್ಡು ಹೊಡೆದು ವಿಶ್ವಾದ್ಯಂತ ಪ್ರಾಬಲ್ಯ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಚೇಂಜ್ ಇ-4 ಯೋಜನೆ ಭಾಗವಾಗಿ ಚಂದ್ರನ ಮೇಲೆ ಗಗನನೌಕೆಯನ್ನು ಯಶಸ್ವಿಯಾಗಿ ಇಳಿಸಿದೆ.

ಬೀಜಿಂಗ್: ಅಮೆರಿಕಕ್ಕೆ ಸೆಡ್ಡು ಹೊಡೆದು ವಿಶ್ವಾದ್ಯಂತ ಪ್ರಾಬಲ್ಯ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಚೇಂಜ್ ಇ-4 ಯೋಜನೆ ಭಾಗವಾಗಿ ಚಂದ್ರನ ಮೇಲೆ ಗಗನನೌಕೆಯನ್ನು ಯಶಸ್ವಿಯಾಗಿ ಇಳಿಸಿದೆ.

ಈಗಾಗಲೇ ಅಮೆರಿಕ ಚಂದ್ರನ ಮೇಲೆ ಮಾನವಸಹಿತ ಗಗನನೌಕೆ ಇಳಿಸಿದೆ. ಆದರೆ ಭೂಮಿಗೆ ಗೋಚರಿಸದ ಚಂದ್ರನ ಗೋಳಾರ್ಧದಲ್ಲಿ ಗಗನನೌಕೆಯನ್ನು ಇಳಿಸಿರುವುದು ಚೀನಾದ ಹಿರಿಮೆ. ಡಿಸೆಂಬರ್ ಆರಂಭದಲ್ಲಿ ಉಡಾಯಿಸಲ್ಪಟ್ಟ ರಾಕೆಟ್ ಮೂರು ದಿನಗಳ ಬಳಿಕ ಚಂದ್ರನ ಕಕ್ಷೆಯನ್ನು ತಲುಪಿತ್ತು. ಆದರೆ ನಿಗದಿಯಂತೆ ಚಂದ್ರನ ಮೇಲಿನ ವೋನ್ ಕರ್ವನ್ ಹೊಂಡದಲ್ಲಿ ಗಗನನೌಕೆ ಇಳಿಸಲು ಚೀನಾ ವಿಜ್ಞಾನಿಗಳಿಗೆ ಒಂದು ವಾರ ಸಮಯ ತಗುಲಿದೆ. ಈ ಹೊಂಡ ಭೂಮಿಗೆ ಗೋಚರಿಸದ ಚಂದ್ರನ ಭಾಗ (ಫಾರ್ ಸೈಡ್ ಅಥವಾ ಡಾರ್ಕ್ ಸೈಡ್)ದಲ್ಲಿ ಇದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫಾರ್ ಸೈಡ್​ನಲ್ಲಿ ಗಗನನೌಕೆ ಇಳಿಸಿದ ಕೀರ್ತಿಗೆ ಚೀನಾ ಪಾತ್ರವಾಗಿದೆ.

ಫಾರ್ ಸೈಡ್ ತಾಂತ್ರಿಕ ಸವಾಲು: ಗಗನನೌಕೆಯನ್ನು ಫಾರ್ ಸೈಡ್​ನಲ್ಲಿ ಇಳಿಸಲು ಅಮೆರಿಕ ವಿಜ್ಞಾನಿಗಳು ಚಿಂತಿಸಿದ್ದರಾದರೂ, ನೇರ ಸಂವಹನಕ್ಕೆ ಅವಕಾಶವಿರದ ಕಾರಣ ಹಿಂಜರಿದಿದ್ದರು. ಕಳೆದ ಮೇನಲ್ಲಿ ಚೀನಾ ಬಾಹ್ಯಾಕಾಶ ವಿಜ್ಞಾನಿಗಳು ಸಂವಹನ ಅಡಚಣೆ ನಿವಾರಿಸಲು ರಿಲೇ ಉಪಗ್ರಹವೊಂದನ್ನು  ಚಂದ್ರ ಕಕ್ಷೆಗೆ ರವಾನಿಸಿದ್ದರು. ಬಳಿಕ ಚೇಂಜ್ ಇ-4 ಉಡಾವಣೆ ಮಾಡಿದ್ದರು. ಫಾರ್ ಸೈಡ್ ಲ್ಯಾಂಡಿಂಗ್ ಮಾಡಿ ಯಶಸ್ಸು ಸಾಧಿಸಿರುವ ಚೀನಾ ವಿಜ್ಞಾನಿಗಳು ಜಾಗತಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನಿದು ಚೇಂಜ್ ಇ- 4 ?

ಚಂದ್ರನ ಮೇಲೆ ಕಾಲಿರಿಸುವ ಉದ್ದೇಶದಿಂದ ಚೀನಾ ಸರ್ಕಾರ 1976ರಲ್ಲಿ ಚೇಂಜ್ ಇ-3 ಯೋಜನೆ ಸಿದ್ಧಗೊಳಿಸಿತ್ತು. ಇದರ ಯಶಸ್ಸಿನ ಎರಡು ವರ್ಷಗಳ ಬಳಿಕ ಭಾರಿ ಹೂಡಿಕೆಯೊಂದಿಗೆ ಚೇಂಜ್ ಇ-4 ಯೋಜನೆಗೆ ಚಾಲನೆ ನೀಡಲಾಯಿತು. ಹಿಂದಿನ ಯೋಜನೆಯಲ್ಲಿನ ಜೇಡ್ ರ್ಯಾಬಿಟ್ ರೋವರ್ ಲ್ಯಾಂಡರ್ ಬಳಸಿಕೊಂಡು ಅಧಿಕ ತೂಕದ ಸಾಧನಗಳನ್ನು ಚಂದ್ರನಲ್ಲಿಗೆ ಹೊತ್ತೊಯ್ಯಲು ವಿಜ್ಞಾನಿಗಳು ಸಿದ್ಧತೆ ನಡೆಸತೊಡಗಿದರು. ಚಂದ್ರನಲ್ಲಿನ ದೇವತೆಯನ್ನು ಚೇಂಜ್ ಇ ಎಂದು ಚೀನಿಯರು ಕರೆಯುತ್ತಾರೆ. ಅದರ ಸೂಚಕವಾಗಿ ಯೋಜನೆಗೆ ಅದೇ ಹೆಸರಿಡಲಾಗಿದೆ.