ಚಂದ್ರನ ಬಳಿ ಚಂದ್ರಯಾನ–2

0
30

ಚಂದ್ರನ ದಕ್ಷಿಣ ಧ್ರುವದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಜುಲೈ 22ರಂದು ಹೊರಟಿರುವ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆ ಆಗಸ್ಟ್ 21 ರ ಬುಧವಾರ ಚಂದ್ರನಿಂದ 4,412 ಕಿ.ಮೀ.ದೂರದ ಕಕ್ಷೆಗೆ ಬಂದು ತಲುಪಿದೆ.

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಜುಲೈ 22ರಂದು ಹೊರಟಿರುವ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆ ಆಗಸ್ಟ್ 21 ರ ಬುಧವಾರ ಚಂದ್ರನಿಂದ 4,412 ಕಿ.ಮೀ.ದೂರದ ಕಕ್ಷೆಗೆ ಬಂದು ತಲುಪಿದೆ.

ಆಗಸ್ಟ್ 20 ರ ಮಂಗಳವಾರ ಬೆಳಿಗ್ಗೆ 9.30ಕ್ಕೆ ಇದು ಯಶಸ್ವಿಯಾಗಿ ಭೂ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಸೇರಿಕೊಂಡಿತ್ತು. ಬುಧವಾರ ಮಧ್ಯಾಹ್ನ 12.50ಕ್ಕೆ ನೌಕೆಯಲ್ಲಿನ ದ್ರವ ಎಂಜಿನ್‌ ಅನ್ನು ಚಾಲೂಗೊಳಿಸಿ (ಬರ್ನಿಂಗ್‌) ನೌಕೆಯನ್ನು ಚಂದ್ರನ ಸುತ್ತ 118 ಕಿ.ಮೀ 4,412 ಕಿ.ಮೀ.ದೂರದಲ್ಲಿ ಸುತ್ತುವ ಕಕ್ಷೆಗೆ ಸೇರಿಸಲಾಯಿತು.

ನೌಕೆಯ ಕಾರ್ಯಕ್ಷಮತೆ ಎಲ್ಲವೂ ಸಮರ್ಪಕವಾಗಿ ಇದೆ. ಇದೇ ಆಗಸ್ಟ್ 28ರಂದು ಇನ್ನೊಂದು ಹಂತದ ಎಂಜಿನ್‌ ಚಾಲೂಗೊಳಿಸುವ ಪ್ರಕ್ರಿಯೆ ನಡೆದು ನೌಕೆಯನ್ನು ಚಂದ್ರನ ಇನ್ನಷ್ಟು ಸಮೀಪಕ್ಕೆ ಕೊಂಡೊಯ್ಯಲಾಗುತ್ತದೆ. ಆಗಸ್ಟ್‌ 30 ಮತ್ತು ಸೆಪ್ಟಂಬರ್ .1ರಂದು ಮತ್ತೆ ಎಂಜಿನ್‌ ಚಾಲೂಗೊಳಿಸಿ ನೌಕೆ ಸುತ್ತುವ ಕಕ್ಷೆಯನ್ನು ತಗ್ಗಿಸಿ ಚಂದ್ರನ ಸಮೀಪಕ್ಕೆ ತರಿಸಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪ್ರಕಟಣೆ ತಿಳಿಸಿದೆ.

ಆಗಸ್ಟ್ 20  ಮಂಗಳವಾರ ಬೆಳಿಗ್ಗೆ 9.02ಕ್ಕೆ ಚಂದ್ರಯಾನ–2 ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ನಿರ್ಗಮಿಸಿತ್ತು. ಆಗ ಅದು ಚಂದ್ರನಿಂದ 18,072 ಕಿ.ಮೀ.ದೂರದಲ್ಲಿತ್ತು. 
 
ಸೆಪ್ಟಂಬರ್.2ರಿಂದ ಅಂತಿಮ ಘಟ್ಟ: ‘ಸೆಪ್ಟಂಬರ್ 2ರಂದು ಚಂದ್ರನಿಂದ 100 ಕಿ.ಮೀ. ಎತ್ತರದ ಕಕ್ಷೆಗೆ ಬರಲಿರುವ ನೌಕೆಯಲ್ಲಿನ ಆರ್ಬಿಟರ್‌ನಿಂದ ಲ್ಯಾಂಡರ್‌ ಬೇರ್ಪಡಲಿದೆ. ಮುಂದಿನ ಐದು ದಿನಗಳಂತೂ ಉಸಿರು ಬಿಗಿಹಿಡಿಯುವ ರೀತಿಯಲ್ಲಿ ಘಟನೆಗಳು ನಡೆಯಲಿದ್ದು, ಸೆಪ್ಟಂಬರ್.7 ರಂದು ನಸುಕಿನ 1.55ಕ್ಕೆ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶಿಸಲಿದೆ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ತಿಳಿಸಿದ್ದಾರೆ.
 
90 ಡಿಗ್ರಿ ಲಂಬವಾದ ಕಕ್ಷೆಯಲ್ಲಿ ನೌಕೆಯನ್ನು ನೆಲೆಗೊಳಿಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವುದು ಬಹಳ ಸವಾಲಿನ ಕೆಲಸ. ಇದೇ ಕಾರಣಕ್ಕೆ ಜಗತ್ತಿನ ಯಾವ ರಾಷ್ಟ್ರವೂ ಇಂತಹ ಪ್ರಯತ್ನಕ್ಕೆ ಕೈಹಾಕಿಲ್ಲ. ಚಂದ್ರಯಾನ–2 ಈ ಸಾಧನೆ ಮಾಡಲಿದ್ದು, ಲ್ಯಾಂಡರ್‌ ಮತ್ತು ರೋವರ್‌ 14 ದಿನಗಳ ಕಾಲ ಚಂದ್ರನಲ್ಲಿನ ನೀರು, ಖನಿಜ, ಕಂಪನ, ಮೇಲ್ವೈ ಲಕ್ಷಣ ಸಹಿತ ಹಲವು ವಿಷಯಗಳಲ್ಲಿ ಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ’ ಎಂದು ಅವರು ಹೇಳಿದ್ದಾರೆ.