ಗ್ರೀಸ್‌ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಬೆಂಗಳೂರು ಬಾಲಕಿಗೆ ಕಿರೀಟ

0
32

ಗ್ರೀಸ್‌ನ ಥೆಸಲೊಂಕಿಯಲ್ಲಿ ಇತ್ತೀಚೆಗೆ ನಡೆದ ’ಲಿಟಲ್‌ ಮಿಸ್‌ ವರ್ಲ್ಡ್‌ –2017’ ಅಂತರಾಷ್ಟ್ರೀಯ ಸೌಂದರ್ಯ ಮತ್ತು ಪ್ರತಿಭಾ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಪೂರ್ವಿ ಜಿ.ಬಿ. ‘ಬೆಸ್ಟ್‌ ಟ್ಯಾಲೆಂಟ್‌ ಪರ್‌ಫಾರ್ಮನ್ಸ್‌’ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.

ಒಂದು ವಾರ ನಡೆದ ಸ್ಪರ್ಧೆಯಲ್ಲಿ 30 ದೇಶಗಳ 65ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.ಇದೇ ಮೊದಲ ಬಾರಿಗೆ ಭಾರತದ ಐವರು ಮಕ್ಕಳು ಆಯ್ಕೆಯಾಗಿದ್ದರು. ಆ ಪೈಕಿ 12 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಪೂರ್ವಿ ಈ ಅಪೂರ್ವ ಸಾಧನೆ ಮಾಡಿದ್ದಾಳೆ. ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನ 7ನೇ ತರಗತಿಯಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿ ಮೂಲತಃ ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಕುಕನೂರು ಗ್ರಾಮದವಳು.

ವಿವಿಧ ರಾಷ್ಟ್ರಗಳ ಹತ್ತಕ್ಕೂ ಹೆಚ್ಚು ತೀರ್ಪುಗಾರರು (ಜ್ಯೂರಿ) ಮಕ್ಕಳ ಆತ್ಮವಿಶ್ವಾಸ, ಪ್ರತಿಭೆ, ಬುದ್ಧಿಮತ್ತೆ, ವಾಕ್‌ ಚಾತುರ್ಯ, ಸೌಂದರ್ಯದ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಿದರು.

ಉಕ್ರೇನ್‌ನ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನತಾಲಿಯಾ ನೇತೃತ್ವದಲ್ಲಿ ದೀವಾ ಫ್ಯಾಷನ್‌ ಗ್ರುಪ್‌ 17 ವರ್ಷಗಳಿಂದ ಈ ಸೌಂದರ್ಯ ಸ್ಪರ್ಧೆ ನಡೆಸುತ್ತಿದ್ದು, ಪ್ರತಿವರ್ಷ ಹಲವು ರಾಷ್ಟ್ರಗಳ ಮಕ್ಕಳು ಭಾಗವಹಿಸುತ್ತಿದ್ದಾರೆ.

ಗ್ರೀಸ್‌ನಲ್ಲಿ ಕನ್ನಡ ಸಂಸ್ಕೃತಿ
ಹೊಯ್ಸಳ ವಾಸ್ತುಶಿಲ್ಪದ ವೈಭೋಗವನ್ನು ಬಿಂಬಿಸುವ ಬೇಲೂರು–ಹಳೆಬೀಡು ದೇವಾಲಯಗಳ ಶಿಲಾ ಬಾಲಕಿ, ದರ್ಪಣ ಸುಂದರಿಯ ವೇಷ ತೊಟ್ಟು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಬಾಲಕಿ ಕನ್ನಡ ನಾಡಿನ ಕಲೆ, ಸಂಸ್ಕೃತಿ ಪರಿಚಯಿಸಿದಳು. ಅಂತಿಮ ಸುತ್ತಿನಲ್ಲಿ ಕಥಕ್‌ ಮತ್ತು ಸಮಕಾಲೀನ ನೃತ್ಯ ಎಲ್ಲರ ಗಮನ ಸೆಳೆಯಿತು.

ಆಯ್ಕೆ ಹೇಗೆ?
ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದಿದ್ದ ಆಡಿಷನ್‌ನಲ್ಲಿ ಹತ್ತು ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಚೆನ್ನೈನಲ್ಲಿ ಇದೇ ಆಗಸ್ಟ್‌ನಲ್ಲಿ ನಡೆದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಈ ಬಾಲಕಿ ಗ್ರೀಸ್‌ ಅಂತರರಾಷ್ಟ್ರೀಯ ಸ್ಪರ್ಧೆಗೆ ಪ್ರವೇಶ ಪಡೆದಿದ್ದಳು.