ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ದ ಭ್ರಷ್ಟಾಚಾರದ ಆರೋಪವಿದ್ದರೆ ಅವಿಶ್ವಾಸ ನಿರ್ಣಯಕ್ಕೆ ಸಮಯದ ಮಿತಿ ಇಲ್ಲ :: ಹೈಕೋರ್ಟ್ ಆದೇಶ

0
815

‘ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ನಿರ್ದಿಷ್ಟ ಆರೋಪಗಳಿದ್ದರೆ ಯಾವುದೇ ಸಮಯದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದು’ ಎಂದು ಹೈಕೋರ್ಟ್‌ ಆದೇಶ ನೀಡಿದೆ.

ಬೆಂಗಳೂರು: ‘ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ನಿರ್ದಿಷ್ಟ ಆರೋಪಗಳಿದ್ದರೆ ಯಾವುದೇ ಸಮಯದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದು’ ಎಂದು ಹೈಕೋರ್ಟ್‌ ಆದೇಶ ನೀಡಿದೆ.

ಈ ಕುರಿತಂತೆ ಸಲ್ಲಿಸಲಾಗಿದ್ದ 60ಕ್ಕೂ ಹೆಚ್ಚು ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾ
ಗೀಯ ನ್ಯಾಯಪೀಠ ಶುಕ್ರವಾರ ವಜಾ
ಗೊಳಿಸಿದೆ.

‘ಒಂದು ವೇಳೆ ನಿರ್ದಿಷ್ಟ ಆಪಾದನೆ ಇಲ್ಲದಿದ್ದರೆ 30 ತಿಂಗಳ ನಂತರವೇ ಅವಿಶ್ವಾಸ ನಿರ್ಣಯ ಮಂಡನೆ ಮಾಡ
ಬಹುದು’ ಎಂದು ಹೇಳುವ ಮೂಲಕ, ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಎತ್ತಿ ಹಿಡಿಯಲಾಗಿದೆ.

‘ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಕಲಂ 49 ಉಪ ನಿಯಮ (2) ಸಾಂವಿಧಾನಿಕ ಸಿಂಧುತ್ವ ಹೊಂದಿದೆ’ ಎಂದೂ ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: 60ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಆಯಾ ಉಪವಿಭಾಗಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ ಮತ್ತು ಅವಿಶ್ವಾಸ ನಿರ್ಣಯ ಮಂಡನೆಯನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ನಿಯಮಗಳ ಗೊಂದಲ: ‘ಯಾವುದೇ ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ, ಭ್ರಷ್ಟಾಚಾರ, ಅಧಿಕಾರ ದುರಪಯೋಗ ಅಥವಾ ಯಾವುದೇ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪಗಳಿದ್ದರೆ ಅವಿಶ್ವಾಸ ಮಂಡಿಸಬಹುದು’ ಎಂಬುದು 2016ರ ಫೆಬ್ರುವರಿ 25ರಂದು ಕಾಯ್ದೆಗೆ ತರಲಾದ ತಿದ್ದು
ಪಡಿಯ ತಿರುಳು.

‘ಇದೇ ಕಾಯ್ದೆಯ ಉಪ ನಿಯಮ (1)ರ ಅನುಸಾರ ಅವಿಶ್ವಾಸ ನಿರ್ಣಯವನ್ನು 30 ತಿಂಗಳ ಒಳಗಿನ ಅವಧಿಯಲ್ಲಿ ಮಂಡಿಸಬಾರದು’ ಎಂಬ ಅಂಶವನ್ನು 1993ರಿಂದಲೂ ಹಾಗೆಯೇ ಉಳಿಸಿ
ಕೊಂಡು ಬರಲಾಗಿದೆ.

ಈ ಎರಡೂ ಉಪ ನಿಯಮಗಳ ನಡುವಿನ ಅಂತರದಿಂದಾಗಿ ಅವಿಶ್ವಾಸ ನಿರ್ಣಯದ ಅನುಷ್ಠಾನದಲ್ಲಿ ಗೊಂದಲ ಉಂಟಾಗಿತ್ತು. ಅರ್ಜಿದಾರರು ಇದನ್ನು ಪ್ರಶ್ನಿಸಿದ್ದರು. ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ವಾದ ಮಂಡಿಸಿದ್ದರು.

‘ಮೇಲ್ಮನವಿ ಸಲ್ಲಿಸುತ್ತೇವೆ’

‘ಸರ್ಕಾರ ಇನ್ನೂ ನಿರ್ದಿಷ್ಟವಾದ ನಿಯಮಾವಳಿ ರೂಪಿಸಿ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಹಾಗಾಗಿ ವಿಭಾಗೀಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಮೇಲ್ಮನವಿ ಅರ್ಜಿದಾರರ ಪರ ವಕೀಲ ಪಿ.ಪಿ.ಹೆಗ್ಡೆ ಪ್ರತಿಕ್ರಿಯಿಸಿದರು.