ಗ್ರಾಮೀಣ ಬದುಕಿಗೆ ಡಿಜಿಟಲ್‌ ಸ್ಪರ್ಶ: ಮೋದಿ

0
37

ಗ್ರಾಮೀಣ ಪ್ರದೇಶದ ಜನರಲ್ಲಿ ಡಿಜಿಟಲ್‌ ತಂತ್ರಜ್ಞಾನದ ಅರಿವು ಹೆಚ್ಚಿಸುವ ಉದ್ದೇಶದ ‘ಗ್ರಾಮೀಣ್‌ ಡಿಜಿಟಲ್‌ ಸಾಕ್ಷರತಾ ಅಭಿಯಾನ’ ಯೋಜನೆಗೆ ಪ್ರಧಾನಿ ಮೋದಿ ಅವರು ಶನಿವಾರ ಚಾಲನೆ ನೀಡಿದರು.

ಎರಡು ದಿನಗಳ ಗುಜರಾತ್‌ ಪ್ರವಾಸದ ಮೇರೆಗೆ ಶನಿವಾರ ತವರು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ, ಗಾಂಧಿನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಉದ್ಘಾಟನೆ ಮಾಡಿದರು. ಇದೇ ವೇದಿಕೆಯಲ್ಲೇ ಡಿಜಿಟಲ್‌ ಸಾಕ್ಷರತಾ ಅಭಿಯಾನಕ್ಕೂ ಅವರು ಚಾಲನೆ ಕೊಟ್ಟರು.

ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಡಿಜಿಟಲ್‌ ವಿಭಜನೆಯನ್ನು ಹೋಗಲಾಡಿಸಲು ಶ್ರಮಿಸುವಂತೆ ಕರೆ ನೀಡಿದರು. ತಂತ್ರಜ್ಞಾನದ ಕ್ರಾಂತಿಯೇ ‘ನವಭಾರತ’ದ ಅಡಿಪಾಯವಾಗಲಿದೆ ಎಂದರು.

ಅಗತ್ಯ ಆಧರಿತ ತಾಂತ್ರಿಕ ಸಂಶೋಧನೆಗಳ ಮೂಲಕ ಜನರ ಜೀವನದಲ್ಲಿ ಬದಲಾವಣೆ ತರುವ ಪ್ರಕ್ರಿಯೆಗೆ ಕೈ ಜೋಡಿಸುವಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಕರೆ ನೀಡಿದರು.

ಭಾಷಣದ ವೇಳೆ ‘ಜನಧನ್‌’, ‘ಆಧಾರ್‌’ ಮತ್ತು ‘ಮೊಬೈಲ್‌’ (ಜೆಎಎಂ) ಗಳನ್ನು ತಾಂತ್ರಿಕ ತ್ರಿಮೂರ್ತಿಗಳು ಎಂದು ಬಣ್ಣಿಸಿದ ಮೋದಿ ಅವರು, ಆಧಾರ್‌ ಮೂಲಕ ಪಡೆಯಲಾದ ಅಗಾಧ ಪ್ರಮಾಣದ ಬಯೋಮೆಟ್ರಿಕ್‌ ದತ್ತಾಂಶವು ಜನರನ್ನು ಸಶಕ್ತಗೊಳಿಸುವ ಕ್ರಮಗಳಿಗೆ ನೆರವಾಗಲಿದೆ ಎಂದರು.

 

ಏನಿದು ಅಭಿಯಾನ?

ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ಡಿಜಿಟಲ್‌ ಸಾಕ್ಷರರನ್ನಾಗಿಸುವ ಪ್ರಧಾನಿ ಮೋದಿ ಅವರ ಕನಸನ್ನು ಸಾಕಾರಗೊಳಿಸಲು ‘ಡಿಜಿಟಲ್‌ ಇಂಡಿಯಾ’ ಅಭಿಯಾನದ ಭಾಗವಾಗಿ ಸರಕಾರ ಕೈಗೊಂಡಿರುವ ಪ್ರಮುಖ ಉಪಕ್ರಮ ಇದಾಗಿದೆ.

‘ಪ್ರಧಾನಮಂತ್ರಿ ಗ್ರಾಮೀಣ್‌ ಡಿಜಿಟಲ್‌ ಸಾಕ್ಷರತಾ ಅಭಿಯಾನ್‌’ (ಪಿಎಂಜಿ-ದಿಶಾ) ಹೆಸರಿನ ಈ ಅಭಿಯಾನದ ಭಾಗವಾಗಿ, ಆರಂಭಿಕವಾಗಿ ದೇಶಾದ್ಯಂತ ಕನಿಷ್ಠ 6 ಕೋಟಿ ಜನರಲ್ಲಿ ಡಿಜಿಟಲ್‌ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ. 2019ರ ಮಾರ್ಚ್‌ 31ರ ವೇಳೆಗೆ ಈ ಯೋಜನೆಯು ದೇಶದ ಶೇ. 40ರಷ್ಟು ಗ್ರಾಮೀಣ ಜನತೆಯನ್ನು ತಲುಪುವ ನಿರೀಕ್ಷೆ ಹೊಂದಲಾಗಿದೆ.

ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಜನತೆಗೆ ಉಚಿತವಾಗಿ ಕಂಪ್ಯೂಟರ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ಫೋನ್‌ ಇತ್ಯಾದಿ ಆಧುನಿಕ ಉಪಕರಣಗಳ ಬಳಕೆಯ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಇಂಟರ್‌ನೆಟ್‌ ಬಳಕೆ, ಡಿಜಿಟಲ್‌ ವ್ಯವಹಾರ, ಇ-ಮೇಲ್‌ ಕಳುಹಿಸುವುದು, ಆನ್‌ಲೈನ್‌ ಮೂಲಕವೇ ಸರಕಾರದ ವಿವಿಧ ಯೋಜನೆಗಳನ್ನು ಪಡೆಯುವುದರ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಮುಖ್ಯವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ, ಇತರ ಹಿಂದುಳಿದ ವರ್ಗಗಳು, ಬಿಪಿಎಲ್‌ ಕುಟುಂಬಗಳು, ಅಂಗವಿಕಲರು, ಮಹಿಳೆಯರು ಈ ಅಭಿಯಾನದ ಪ್ರಮುಖ ಭಾಗವಾಗಲಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ ಶಿಫಾರಸುಗೊಂಡ, ಗ್ರಾಮೀಣ ಭಾಗದಲ್ಲಿ ನೆಲೆಸಿರುವ 14ರಿಂದ 60 ವಯೋಮಾನದ ಅನಕ್ಷರಸ್ತರು ಈ ಅಭಿಯಾನದಡಿ ಡಿಜಿಟಲ್‌ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ.