ಗ್ರಾಚ್ಯುಟಿ ಏರಿಸುವ ಕಾಯ್ದೆ ತಿದ್ದುಪಡಿಗೆ ಕೇಂದ್ರದ ಒಪ್ಪಿಗೆ

0
24

ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತವನ್ನು ದ್ವಿಗುಣಗೊಳಿಸಿ ₹20 ಲಕ್ಷಕ್ಕೆ ಏರಿಸುವ ಕಾನೂನು ತಿದ್ದುಪಡಿಗೆ ಕೇಂದ್ರ ಸಂಪುಟ ಮಂಗಳವಾರ (12/09/2017) ಒಪ್ಪಿಗೆ ನೀಡಿದೆ.

ಏಳನೇ ವೇತನ ಆಯೋಗದ ಅನುಷ್ಠಾನದಿಂದಾಗಿ ಕೇಂದ್ರ ಸರ್ಕಾರದ ನೌಕರರ ಗ್ರಾಚ್ಯುಟಿಯ ಗರಿಷ್ಠ ಮೊತ್ತ ₹20 ಲಕ್ಷಕ್ಕೆ ಏರಿಕೆಯಾಗಿದೆ. ಅದೇ ಮಾದರಿಯನ್ನು ರಾಜ್ಯ ಸರ್ಕಾರದ ನೌಕರರು ಮತ್ತು ಖಾಸಗಿ ಕ್ಷೇತ್ರದ ನೌಕರರಿಗೆ ವಿಸ್ತರಿಸಲು ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ. ಒಂದು ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷ ಕೆಲಸ ಮಾಡಿದವರು ಗ್ರಾಚ್ಯುಟಿ ಪಡೆಯಲು ಅರ್ಹರಾಗುತ್ತಾರೆ.

ಈ ಬಗ್ಗೆ ಗ್ರಾಚ್ಯುಟಿ ಪಾವತಿ ತಿದ್ದುಪಡಿ ಮಸೂದೆ 2017 ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಕೆಲಸದಿಂದ ನಿವೃತ್ತರಾದ ಬಳಿಕ ನೌಕರರ ನಿವೃತ್ತ ಜೀವನಕ್ಕೆ ಆರ್ಥಿಕ ಭದ್ರತೆ ಇರಬೇಕು ಎಂಬ ಕಾರಣಕ್ಕೆ ಮೊತ್ತವನ್ನು ದುಪ್ಪಟ್ಟುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

‘ಹಣದುಬ್ಬರ ಮತ್ತು ವೇತನ ಏರಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಖಾಸಗಿ ವಲಯದ ನೌಕರರಿಗೂ ಗ್ರಾಚ್ಯುಟಿ ಏರಿಸಲು ನಿರ್ಧರಿಸಲಾಗಿದೆ. ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ವ್ಯಾಪ್ತಿಯಲ್ಲಿ ಬರುವ ಎಲ್ಲರಿಗೂ ಇದು ಅನ್ವಯ ಆಗಬೇಕು’ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಏನಿದು ‘ಗ್ರಾಚ್ಯುಟಿ’?

ನೌಕರ ನಿವೃತ್ತನಾದಾಗ ಅಥವಾ ಕೆಲಸ ಬಿಟ್ಟಾಗಿನ ಕೊನೆಯ 15 ದಿನಗಳ ಮೂಲವೇತನ ಮತ್ತು ತುಟ್ಟಿಭತ್ಯೆಯನ್ನು ಕೆಲಸ ಮಾಡಿದ ಒಟ್ಟು ವರ್ಷಗಳ ಸಂಖ್ಯೆಯಿಂದ ಗುಣಿಸಿ ಬರುವ ಮೊತ್ತವನ್ನು ಗ್ರಾಚ್ಯುಟಿ ಎಂದು ನೀಡಲಾಗುತ್ತದೆ. ಗ್ರಾಚ್ಯುಟಿಯು ತೆರಿಗೆಮುಕ್ತ ಸಂಪಾದನೆಯಾಗಿದೆ.