ಗೋವಾ: ಡಿಸಿಎಂ ಧವಳೀಕರ್‌ಗೆ ಕೊಕ್

0
345

ಗೋವಾದಲ್ಲಿ ಮಾರ್ಚ್ 27 ರ ಬುಧವಾರ ತಡರಾತ್ರಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಉಪ ಮುಖ್ಯಮಂತ್ರಿ ಸುದಿನ್‌ ಧವಳೀಕರ್‌ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದಾರೆ.

ಪಣಜಿ (ಪಿಟಿಐ): ಗೋವಾದಲ್ಲಿ ಮಾರ್ಚ್ 27 ರ  ಬುಧವಾರ ತಡರಾತ್ರಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಉಪ ಮುಖ್ಯಮಂತ್ರಿ ಸುದಿನ್‌ ಧವಳೀಕರ್‌ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದಾರೆ.

ಧವಳೀಕರ್‌ ಸೇರಿ ಮೂವರು ಶಾಸಕರನ್ನು ಹೊಂದಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಹೋಳಾಗಿದೆ. ಇದರ ಇಬ್ಬರು ಶಾಸಕರು ಬಿಜೆಪಿಗೆ ಸೇರಿದ್ದಾರೆ. ಎಂಜಿಪಿಯಲ್ಲೇ ಮುಂದುವರಿದಿರುವ ಧವಳೀಕರ್‌ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. 

‘ಸಚಿವ ಸಂಪುಟದಿಂದ ಧವಳೀಕರ್‌ ಅವರನ್ನು ಕೈಬಿಡಲಾಗಿದೆ. ಖಾಲಿಯಾಗಿರುವ ಸಚಿವ ಸ್ಥಾನವನ್ನು ಶೀಘ್ರದಲ್ಲಿಯೇ ತುಂಬಲಾಗುವುದು’ ಎಂದು ಮುಖ್ಯಮಂತ್ರಿ ಸಾವಂತ್‌ ಅವರು ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ತಿಳಿಸಿದ್ದಾರೆ.

ಧವಳೀಕರ್‌ ಅವರಿಗೆ ನೀಡಿದ್ದ ಸಾರಿಗೆ ಮತ್ತು ಲೋಕೋಪಯೋಗಿ ಖಾತೆಗಳನ್ನು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತಮ್ಮ ಬಳಿಯೇ 
ಇಟ್ಟುಕೊಂಡಿದ್ದಾರೆ.

ಬುಧವಾರ ಬೆಳಗಿನ ಜಾವ ಎಂಜಿಪಿಯ ಮೂವರು ಶಾಸಕರ ಪೈಕಿ, ಮನೋಹರ್‌ ಅಜಗಾಂವಕರ್‌ ಮತ್ತು ದೀಪಕ್‌ ಪಾವಸ್ಕರ್‌ ಅವರು ಬಿಜೆಪಿಯೊಳಗೆ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ವಿಲೀನಗೊಂಡಿದೆ ಎಂದು ಸಭಾಧ್ಯಕ್ಷ ಮೈಕೆಲ್‌ ಲೋಬೊ ಅವರಿಗೆ ಪತ್ರ ಸಲ್ಲಿಸಿದ್ದರು. ಆದರೆ, ಧವಳೀಕರ್‌ ಈ ಪತ್ರಕ್ಕೆ ಸಹಿ ಹಾಕಿಲ್ಲ. 

‘ಜನರು ಇದೆಲ್ಲವನ್ನೂ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದಾರೆ. ಎಂಜಿಪಿ ಜನರ ಪಕ್ಷವಾಗಿದ್ದು, ಇದನ್ನು ಅಷ್ಟು ಸುಲಭವಾಗಿ ನಿರ್ನಾಮ ಮಾಡಲು ಸಾಧ್ಯವಿಲ್ಲ’ ಎಂದು ಧವಳೀಕರ್‌ ಹೇಳಿದ್ದಾರೆ.

‘ವಿರೋಧಿಗಳ ಕುತಂತ್ರಕ್ಕೆ ನಮ್ಮ ಪಕ್ಷ ಗುರಿಯಾಗಿದೆ. ನಮ್ಮ ಶಾಸಕರಿಗೆ ತೊಂದರೆಯಾದರೆ ಸರ್ಕಾರವನ್ನು ಕೆಡವಲು ಹಿಂಜರಿಯುವುದಿಲ್ಲ’ ಎಂದು ಎಂಜಿಪಿ ಅಧ್ಯಕ್ಷ ದೀಪಕ್‌ ಧವಳೀಕರ್‌ ಮಂಗಳವಾರವಷ್ಟೇ ಹೇಳಿದ್ದರು.