ಗೋಟಬಯ ರಾಜಪಕ್ಸೆ ಶ್ರೀಲಂಕಾ ನೂತನ ಅಧ್ಯಕ್ಷ

0
15

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಗೋಟಬಯ ರಾಜಪಕ್ಸೆ (70) ಅವರು ನವೆಂಬರ್ 17 ರ ಭಾನುವಾರ ಆಯ್ಕೆಯಾಗಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದ ಗೋಟಬಯ ಅವರು ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸಜಿತ್‌ ಪ್ರೇಮದಾಸ ಅವರನ್ನು ಸೋಲಿಸಿದ್ದಾರೆ.

ಕೊಲಂಬೊ (ಪಿಟಿಐ): ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಗೋಟಬಯ ರಾಜಪಕ್ಸೆ (70) ಅವರು ನವೆಂಬರ್ 17 ರ ಭಾನುವಾರ ಆಯ್ಕೆಯಾಗಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದ ಗೋಟಬಯ ಅವರು ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸಜಿತ್‌ ಪ್ರೇಮದಾಸ ಅವರನ್ನು ಸೋಲಿಸಿದ್ದಾರೆ. ಈವರೆಗೆ ಮೈತ್ರಿಪಾಲ ಸಿರಿಸೇನಾ ಅವರು ಅಧ್ಯಕ್ಷರಾಗಿದ್ದರು. ಲಂಕಾದಲ್ಲಿ ಭಾನುವಾರ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಮುಂದಿನ ಐದು ವರ್ಷಗಳವರೆಗೆ ಗೋಟಬಯ ಅಧ್ಯಕ್ಷರಾಗಿ ಇರಲಿದ್ದಾರೆ. 

ಶ್ರೀಲಂಕಾದಲ್ಲಿ ಎಲ್‌ಟಿಟಿಇ ಜತೆಗೆ ನಡೆದ ಯುದ್ಧದ್ದೇ ದೊಡ್ಡ ಇತಿಹಾಸ. 30 ವರ್ಷ ನಡೆದ ಈ ಯುದ್ಧವನ್ನು ಕೊನೆಗಾಣಿಸಿದ ಕೀರ್ತಿ ನೂತನ ಅಧ್ಯಕ್ಷ ಗೋಟಬಯ ಅವರದ್ದು. ಇದರಿಂದಾಗಿಯೇ ಇವರು ದ್ವೀಪರಾಷ್ಟ್ರದಲ್ಲಿ ವಿವಾದಾತ್ಮಕ ಮತ್ತು ಹೆಚ್ಚು ಗೌರವಿಸಲಾಗುವ ವ್ಯಕ್ತಿ ಎಂದೂ ಪ್ರಸಿದ್ಧರು. ಈ ಎಲ್ಲಾ ಕಾರಣಗಳಿಂದ ಇವರನ್ನು ‘ಯುದ್ಧದ ಹೀರೊ’ ಎಂದು ಕರೆಯಲಾಗುತ್ತದೆ. 

ಗೋಟಬಯ ಅವರು ಅಸ್ಸಾಂನಲ್ಲಿ 1980 ರಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಅರಣ್ಯ ಯುದ್ಧದ ಬಗ್ಗೆ ತರಬೇತಿ ಪಡೆದುಕೊಂಡಿದ್ದರು. 1983ರಲ್ಲಿ ಮದ್ರಾಸ್‌ ವಿಶ್ವವಿದ್ಯಾಲಯದಿಂದ ರಕ್ಷಣಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಅವರು 2005 ರಿಂದ 2014 ರವರೆಗೆ ಅಧ್ಯಕ್ಷರಾಗಿದ್ದ ವೇಳೆ ರಕ್ಷಣಾ ಕಾರ್ಯದರ್ಶಿಯಾಗಿದ್ದರು.

ಹತ್ಯೆಯಾದ ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಪುತ್ರರಾಗಿರುವ ಸಜಿತ್ ಪ್ರೇಮದಾಸ ಅವರು 25 ವರ್ಷಗಳಿಗೂ ಹೆಚ್ಚು ಕಾಲ ರಾಜಕೀಯದ ಅನುಭವ ಹೊಂದಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

ಮೋದಿ ಶುಭಾಶಯ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಟಬಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.