ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರಕ್ಕೆ ಹಸ್ತಾಂತರ

0
616

ಹೈಕೋರ್ಟ್ ಆದೇಶದಂತೆ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದಿಂದ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಈ ಮೂಲಕ 10 ವರ್ಷಗಳ ಬಳಿಕ ದೇಗುಲ ಮತ್ತೆ ಸರ್ಕಾರದ ಅಧೀನಕ್ಕೆ ಬಂದಿದೆ.

ಗೋಕರ್ಣ: ಹೈಕೋರ್ಟ್ ಆದೇಶದಂತೆ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದಿಂದ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಈ ಮೂಲಕ 10 ವರ್ಷಗಳ ಬಳಿಕ ದೇಗುಲ ಮತ್ತೆ ಸರ್ಕಾರದ ಅಧೀನಕ್ಕೆ ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪುರಾತನ ದೇಗುಲದ ಆಡಳಿತವನ್ನು ಸೆಪ್ಟೆಂಬರ್ 19 ರ ಬುಧವಾರ ಬೆಳಗ್ಗೆ 10 ಗಂಟೆಗೆ ರಾಮಚಂದ್ರಾಪುರ ಮಠ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಹಸ್ತಾಂತರಿಸಿತು. ಮುಜರಾಯಿ ಇಲಾಖೆಯ ಸೂಚನೆಯಂತೆ ಆಡಳಿತ ಹಸ್ತಾಂತರ ಮಾಡಿಕೊಂಡು ಆಡಳಿತಾಧಿಕಾರಿ ಎಚ್. ಹಾಲಪ್ಪ ಅವರಿಗೆ ನೀಡಿದ ಜಿಲ್ಲಾಧಿಕಾರಿ. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಕುಮಟಾ ಉಪವಿಭಾಗಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಉಪಸ್ಥಿತರಿದ್ದರು.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ನೀಡಿ 2012ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿ ರಾಜ್ಯ ಹೈಕೋರ್ಟ್ ಆಗಸ್ಟ್.10 ರಂದು ತೀರ್ಪು ನೀಡಿತ್ತು.  ಸೆಪ್ಟೆಂಬರ್ 10ರೊಳಗೆ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಮಠದಿಂದ ಹಸ್ತಾಂತರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು.

ಅದರಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗೋಕರ್ಣಕ್ಕೆ ತೆರಳಿ ದೇವಾಲಯದ ಆಸ್ತಿಗಳ ಮಹಜರು ನಡೆಸಿ ಪಟ್ಟಿಯನ್ನು ಹೈಕೋರ್ಟ್​ಗೆ ಸಲ್ಲಿಸಿದ್ದರು. ಈ ನಡುವೆ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಶ್ರೀಮಠ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದ ಗೊಂದಲಕ್ಕೀಡಾದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ದೇವಸ್ಥಾನದ ಅಧಿಕಾರ ಹಸ್ತಾಂತರ ಬಗ್ಗೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸ್ಪಷ್ಟನೆ ಕೋರಿದ್ದರು. ರಾಜ್ಯ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ದೇವಸ್ಥಾನವನ್ನು ಸುಪರ್ದಿಗೆ ಪಡೆಯುವಂತೆ ಮುಜರಾಯಿ ಆಯುಕ್ತರು ಸೂಚಿಸಿದ ಹಿನ್ನೆಲೆಯಲ್ಲಿ ಹಸ್ತಾಂತರ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಮುಂದಾಗಿದ್ದರು.

ರಚನೆಯಾಗದ ಸಮಿತಿ:

ದೇವಸ್ಥಾನ ಮೇಲುಸ್ತುವಾರಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ರಚಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಇಬ್ಬರು ಉಪಾಧಿವಂತರು ಹಾಗೂ ಸರ್ಕಾರದಿಂದ ಇನ್ನಿಬ್ಬರು ಸದಸ್ಯರನ್ನು ನೇಮಿಸುವಂತೆ ಸೂಚಿಸಿತ್ತು. ಸರ್ಕಾರ ಸಮಿತಿ ಸದಸ್ಯರನ್ನು ಇದುವರೆಗೂ ನೇಮಿಸಿಲ್ಲ. ಆದರೆ, ಆಡಳಿತಾಧಿಕಾರಿಯಾಗಿ ಎಚ್.ಹಾಲಪ್ಪ ಎಂಬುವವರನ್ನು ನೇಮಿಸಿದೆ.