ಗುವಾಹಟಿ : 33 ನುಸುಳುಕೋರರು ವಾಪಸ್ ಬಾಂಗ್ಲಾ ದೇಶಕ್ಕೆ

0
18

ನುಸುಳುಕೋರರು ಎಂದು ಘೋಷಿಸಿದ್ದ ತನ್ನ 33 ನಾಗರಿಕರನ್ನು ವಾಪಸ್‌ ಕರೆಸಿಕೊಳ್ಳಲು ಇದೇ ಪ್ರಥಮ ಬಾರಿಗೆ ಬಾಂಗ್ಲಾದೇಶ ಸರ್ಕಾರ ಒಪ್ಪಿಕೊಂಡಿದೆ.

ಗುವಾಹಟಿ: ನುಸುಳುಕೋರರು ಎಂದು ಘೋಷಿಸಿದ್ದ ತನ್ನ 33 ನಾಗರಿಕರನ್ನು ವಾಪಸ್‌ ಕರೆಸಿಕೊಳ್ಳಲು ಇದೇ ಪ್ರಥಮ ಬಾರಿಗೆ ಬಾಂಗ್ಲಾದೇಶ ಸರ್ಕಾರ ಒಪ್ಪಿಕೊಂಡಿದೆ.

ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿ ಇವರೆಲ್ಲರನ್ನು ನುಸುಳುಕೋರರು ಎಂದು ಘೋಷಿಸಿತ್ತು.

‘ಬಾಂಗ್ಲಾದೇಶ ಸಹಾಯಕ ಹೈಕಮಿಷನರ್‌ ಇತ್ತೀಚೆಗೆ ರಾಜ್ಯದಲ್ಲಿರುವ ನುಸುಳುಕೋರರನ್ನು ಬಂಧಿಸಿಡಲಾಗಿದ್ದ ಶಿಬಿರಗಳಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವಿದೇಶಿಯರು ಎಂದು ಘೋಷಿಸಲಾಗಿದ್ದ ಈ 33 ಬಂಧಿತರು ಬಾಂಗ್ಲಾದೇಶದವರು ಎನ್ನುವುದು ಪತ್ತೆಯಾಗಿತ್ತು’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪಲ್ಲಬ್‌ ಭಟ್ಟಾಚಾರ್ಯ ತಿಳಿಸಿದ್ದಾರೆ.

‘ಉಭಯ ದೇಶಗಳ ನಡುವೆ ಗಡೀಪಾರು ಮಾಡುವ ಕುರಿತು ಯಾವುದೇ ರೀತಿಯ ಒಪ್ಪಂದ ಇಲ್ಲ. ಹೀಗಾಗಿ, ಬಾಂಗ್ಲಾದೇಶ ಸರ್ಕಾರ ಈ ವಿಷಯದಲ್ಲಿ ಉತ್ತಮ ನಿರ್ಧಾರ ಕೈಗೊಂಡಿದೆ. ವಿದೇಶಾಂಗ ವ್ಯವಹಾರಗಳ ಇಲಾಖೆ ಮುಂದಿನ ಪ್ರಕ್ರಿಯೆ ಬಗ್ಗೆ ಕ್ರಮಕೈಗೊಳ್ಳಲಿದೆ’ ಎಂದು ವಿವರಿಸಿದ್ದಾರೆ.

‘ಬಂಧಿಸಲಾಗಿದ್ದ ಈ 33 ಮಂದಿಯ ವಿಳಾಸವನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ಸರ್ಕಾರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇವರೆಲ್ಲರೂ ಬಾಂಗ್ಲಾದೇಶದ ನಾಗರಿಕರು ಎನ್ನುವುದು ಖಚಿತವಾಯಿತು’ ಎಂದು ಮಾಹಿತಿ ನೀಡಿದ್ದಾರೆ.