ಗುಡಗೇರಿ ಪೊಲೀಸ್ ಠಾಣೆಗೆ ಶ್ರೇಷ್ಠತೆಯ ಗರಿ

0
45

ದೇಶದ ಐದು ಅತ್ಯುತ್ತಮ ಪೊಲೀಸ್‌ ಠಾಣೆಗಳಲ್ಲಿ ಧಾರವಾಡದ ಗುಡಗೇರಿಯ ಪೊಲೀಸ್ ಠಾಣೆಯೂ ಸ್ಥಾನ ಪಡೆದಿದೆ. ಶೇಕಡಾ ನೂರರಷ್ಟು ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಹೆಗ್ಗಳಿಕೆ ಈ ಠಾಣೆಗಿದೆ.

ನವದೆಹಲಿ: ದೇಶದ ಐದು ಅತ್ಯುತ್ತಮ ಪೊಲೀಸ್‌ ಠಾಣೆಗಳಲ್ಲಿ ಧಾರವಾಡದ ಗುಡಗೇರಿಯ ಪೊಲೀಸ್  ಠಾಣೆಯೂ ಸ್ಥಾನ ಪಡೆದಿದೆ. ಶೇಕಡಾ ನೂರರಷ್ಟು ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಹೆಗ್ಗಳಿಕೆ ಈ ಠಾಣೆಗಿದೆ. 

ಮೂಲಸೌಕರ್ಯ ಹಾಗೂ ನಾಗರಿಕರ ಪ್ರತಿಕ್ರಿಯೆ ವಿಚಾರದಲ್ಲಿ ಕೊಂಚ ಹಿನ್ನಡೆಯಾಗಿದ್ದರಿಂದ ಠಾಣೆ ರ‍್ಯಾಂಕಿಂಗ್ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ‘ಪೊಲೀಸ್ ಠಾಣೆಗಳ ರ‍್ಯಾಂಕಿಂಗ್–2018’ ವರದಿ ಅಭಿಪ್ರಾಯಪಟ್ಟಿದೆ.  

ರ‍್ಯಾಂಕಿಂಗ್ ಪಟ್ಟಿಯು ಕಳೆದ ಡಿಸೆಂಬರ್‌ನಲ್ಲೇ ಪ್ರಕಟಗೊಂಡಿತ್ತು. ಆದರೆ ಠಾಣೆಗಳ ಕಾರ್ಯಕ್ಷಮತೆ, ಮೂಲಸೌಕರ್ಯ ಮೊದಲಾದ ವಿಸ್ತೃತ ಮಾಹಿತಿ ಒಳಗೊಂಡ ವರದಿಯು ಇದೀಗ ಬಹಿರಂಗವಾಗಿದೆ. 

ಅಪರಾಧ ತಡೆ, ಪತ್ತೆಹಚ್ಚುವಿಕೆ, ಪ್ರಕರಣಗಳ ವಿಲೇವಾರಿ, ಸಮುದಾಯ ಪೊಲೀಸ್ ವ್ಯವಸ್ಥೆ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ಗುಡಗೇರಿ ಠಾಣೆ ಅತ್ಯುತ್ತಮ ಕೆಲಸ ಮಾಡಿದ ಕಾರಣ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದಿದೆ. ಕಾರ್ಯಕ್ಷಮತೆ ವಿಚಾರದಲ್ಲಿ 4ನೇ ಸ್ಥಾನ ಪಡೆದಿದೆ. 

2017ರಲ್ಲಿ ದಾಖಲಾದ ಎಲ್ಲ 82 ಪ್ರಕರಣ ವಿಲೇವಾರಿಯಾಗಿದ್ದವು. 2018ರಲ್ಲಿ 101ರ ಪೈಕಿ 91 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು ಎಂದು ಇನ್ಸ್‌ಪೆಕ್ಟರ್ ನವೀನ್ ಜಕ್ಕಲಿ ತಿಳಿಸಿದ್ದಾರೆ. 

ದೌರ್ಜನ್ಯ, ಆಸ್ತಿ ವ್ಯಾಜ್ಯ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅಂಶಗಳನ್ನು ಮಾನದಂಡವಾಗಿಟ್ಟುಕೊಂಡು ಠಾಣೆಗಳ ಪಟ್ಟಿ ತಯಾರಿಸಲಾಗಿತ್ತು. 

ಗುಡಗೇರಿ ಮಾತ್ರವಲ್ಲದೇ ರಾಜ್ಯದ ಇತರ ಮೂರು ಠಾಣೆಗಳು ಈ ಪಟ್ಟಿಯಲ್ಲಿ ಗಮನ ಸೆಳೆದಿವೆ. ಗದಗ (ಸಂಚಾರ ಠಾಣೆ), ಕೊಡಗಿನ ಸೋಮವಾರಪೇಟೆ ಹಾಗೂ ಮೈಸೂರಿನ ಸಾಲಿಗ್ರಾಮ ಠಾಣೆಗಳು ಈ ಪಟ್ಟಿಯಲ್ಲಿವೆ. ಈ ಪೈಕಿ ಸಾಲಿಗ್ರಾಮ ಠಾಣೆ ಮೂಲಸೌಕರ್ಯ ವಿಚಾರದಲ್ಲಿ ಉತ್ತಮ ರ‍್ಯಾಂಕ್ ಪಡೆದಿದೆ.

# ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ‘ಪೊಲೀಸ್ ಠಾಣೆಗಳ ರ‍್ಯಾಂಕಿಂಗ್–2018’ (ಟಾಪ್ 10 ಪೊಲೀಸ್ ಠಾಣೆಗಳು)

1 ನೇ ರ‍್ಯಾಂಕ್  ಕಲು ಪೊಲೀಸ್‌ ಠಾಣೆ (ರಾಜಸ್ಥಾನ)

2 ನೇ ರ‍್ಯಾಂಕ್ ಕ್ಯಾಂಪ್ಬೆಲ್ ಕೊಲ್ಲಿ ಪೊಲೀಸ್‌ ಠಾಣೆ  (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು)

3 ನೇ ರ‍್ಯಾಂಕ್  ಫರಕ್ಕಾ ಪೊಲೀಸ್‌ ಠಾಣೆ (ಪಶ್ಚಿಮ ಬಂಗಾಳ)

4 ನೇ ರ‍್ಯಾಂಕ್  ನೆಟ್ಟಪಕ್ಕಂ ಪೊಲೀಸ್‌ ಠಾಣೆ  (ಪುದುಚೇರಿ)

5 ನೇ ರ‍್ಯಾಂಕ್  ಗುಡಗೇರಿಯ ಪೊಲೀಸ್‌ ಠಾಣೆ(ಕರ್ನಾಟಕ)

6 ನೇ ರ‍್ಯಾಂಕ್  ಚೋಪಾಲ್  ಪೊಲೀಸ್‌ ಠಾಣೆ (ಹಿಮಾಚಲ ಪ್ರದೇಶ)

7 ನೇ ರ‍್ಯಾಂಕ್  ಲಖೇರಿ ಪೊಲೀಸ್‌ ಠಾಣೆ (ರಾಜಸ್ಥಾನ)

ನೇ ರ‍್ಯಾಂಕ್  ಪೆರಿಯಕುಲಂ  ಪೊಲೀಸ್‌ ಠಾಣೆ (ತಮಿಳುನಾಡು)

ನೇ ರ‍್ಯಾಂಕ್  ಮುನ್ಸಾರಿ ಪೊಲೀಸ್‌ ಠಾಣೆ (ಉತ್ತರಾಖಂಡ)

10 ನೇ ರ‍್ಯಾಂಕ್  ಚುರ್ಚೋರೆಮ್ ಪೊಲೀಸ್‌ ಠಾಣೆ (ಗೋವಾ)