ಗಾಲ್ಫ್‌: ರಶೀದ್‌ ಖಾನ್‌ಗೆ ಪ್ರಶಸ್ತಿ

0
13

ಭಾರತದ ರಶೀದ್‌ ಖಾನ್‌ ಅವರು ಇಲ್ಲಿನ ಚಂಡೀಗಡ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಟಾಟಾ ಸ್ಟೀಲ್‌ ಪಿಜಿಟಿಐ ಪ್ಲೇಯರ್ಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಚಂಡೀಗಡ (ಪಿಟಿಐ): ಭಾರತದ ರಶೀದ್‌ ಖಾನ್‌ ಅವರು ಇಲ್ಲಿನ ಚಂಡೀಗಡ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಟಾಟಾ ಸ್ಟೀಲ್‌ ಪಿಜಿಟಿಐ ಪ್ಲೇಯರ್ಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಮೊದಲ ಮೂರು ದಿನ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲವಾಗಿದ್ದ ದೆಹಲಿಯ ರಶೀದ್‌, ಅಂತಿಮ ದಿನವಾದ ಶುಕ್ರವಾರ ಅಮೋಘ ಕೌಶಲ ತೋರಿದರು. ಈ ಮೂಲಕ ಒಟ್ಟು 275 ಸ್ಕೋರ್‌ ಗಳಿಸಿ ಚಾಂಪಿಯನ್‌ ಆದರು.

ಏಷ್ಯನ್‌ ಟೂರ್‌ನಲ್ಲಿ ಎರಡು ಸಲ ಕಿರೀಟ ಮುಡಿಗೇರಿಸಿಕೊಂಡಿರುವ 28 ವರ್ಷದ ರಶೀದ್‌, ವೃತ್ತಿಬದುಕಿನಲ್ಲಿ ಗೆದ್ದ ಒಟ್ಟಾರೆ 12ನೇ ಪ್ರಶಸ್ತಿ ಇದಾಗಿದೆ.

ನೋಯ್ಡಾದ ಗೌರವ್‌ ಪ್ರತಾಪ್‌ ಸಿಂಗ್‌ ಮತ್ತು ಕೋಲ್ಕತ್ತದ ಶಂಕರ್‌ ದಾಸ್‌ ಅವರು ಜಂಟಿಯಾಗಿ ರನ್ನರ್‌ ಅಪ್‌ ಆದರು. ಇವರು ತಲಾ 277 ಸ್ಕೋರ್‌ ಸಂಗ್ರಹಿಸಿದರು.

ಸ್ಥಳೀಯ ಗಾಲ್ಫರ್‌ಗಳಾದ ಆದಿಲ್‌ ಬೇಡಿ, ಕರಣ್‌ದೀಪ್‌ ಕೊಚ್ಚಾರ್‌ ಮತ್ತು ಹರೇಂದ್ರ ಗುಪ್ತಾ ಅವರು ಜಂಟಿ ಎಂಟನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಇವರು ತಲಾ 281 ಸ್ಕೋರ್‌ ಗಳಿಸಿದರು.

‘ಈ ಋತುವಿನಲ್ಲಿ ಎರಡನೇ ಟ್ರೋಫಿ ಜಯಿಸಿದ್ದು ಖುಷಿ ನೀಡಿದೆ. ಮೊದಲ ಮೂರು ದಿನ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಿರಲಿಲ್ಲ. ಹೀಗಾಗಿ ಅಂತಿಮ ದಿನ ಗುಣಮಟ್ಟದ ಸಾಮರ್ಥ್ಯ ತೋರಲೇಬೇಕೆಂದು ನಿರ್ಧರಿಸಿದ್ದೆ. ಎಲ್ಲವೂ ಯೋಜನೆಯಂತೆಯೇ ನಡೆದಿದ್ದರಿಂದ ಪ್ರಶಸ್ತಿ ಒಲಿಯಿತು’ ಎಂದು ರಶೀದ್‌ ಖುಷಿ ವ್ಯಕ್ತಪಡಿಸಿದ್ದಾರೆ.