ಗಾಂಧಿ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯದ ಕಾರ್ಯಾಗೃಹದಲ್ಲಿದ್ದ 48 ಕೈದಿಗಳಿಗೆ ಬಿಡುಗಡೆ ಭಾಗ್ಯ

0
587

ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ರಾಜ್ಯ ಕಾರಾಗೃಹಗಳಲ್ಲಿದ್ದ 48 ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಯಿತು.

ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ರಾಜ್ಯ ಕಾರಾಗೃಹಗಳಲ್ಲಿದ್ದ 48 ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅಕ್ಟೋಬರ್ 5 ರ ಶುಕ್ರವಾರ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಮೂವರು ಬಾಂಗ್ಲಾ ಪ್ರಜೆಗಳು ಸೇರಿ 15 ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಿದರು.

ಇದುವರೆಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳನ್ನು ಮಾತ್ರ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 48 ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡಲಾಗಿದೆ.

ಪಶ್ಚಾತ್ತಾಪವಾಗಿದೆ: ಕಷ್ಟವೆಂದರೆ ಏನೆಂಬುದೆ ತಿಳಿಯದ ನಾನು, ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದೆ. ಹಣದ ಆಸೆಗೆ ಬಿದ್ದು, ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದೆ. ಎರಡು ವರ್ಷ ಜೈಲಿನಲ್ಲಿದ್ದ ನನಗೆ ಪಶ್ಚಾತ್ತಾಪವಾಗಿದ್ದು, ಈಗ ಪುಟ್ಟ ಮಗಳನ್ನು ನೋಡಬೇಕೆಂದೆನಿಸುತ್ತಿದೆ. ಪತ್ನಿ ಬಳಿ ಕ್ಷಮೆ ಕೇಳುತ್ತೇನೆ ಎಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಹೊಂದಿದ ಯಲಹಂಕದ ಅಸ್ಲಂ ಪಾಷಾ (30) ‘ವಿಜಯವಾಣಿ’ಗೆ ತಿಳಿಸಿದರು.

ಬಿಡುಗಡೆ ಖುಷಿ

ಚಿನ್ನದ ವ್ಯವಹಾರ ಮಾಡುತ್ತಿದ್ದ ಜಯನಗರದ ಆಂಜನೇಯಲು ಗುಪ್ತಾ (82) ಬ್ಯಾಂಕ್​ವೊಂದಕ್ಕೆ ವಂಚನೆ ಎಸಗಿದ ಆರೋಪದಲ್ಲಿ 2007ರಲ್ಲಿ ದೆಹಲಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದರು. ಜಾಮೀನಿನ ಮೇಲೆ ಹೊರ ಬಂದ ಗುಪ್ತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಮತ್ತೆ ನ್ಯಾಯಾಲಯದ ಮೊರೆ ಹೋಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2017ರಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇದೀಗ ಬಿಡುಗಡೆ ಹೊಂದಿರುವ ಖುಷಿಯಲ್ಲಿ ಕುಟುಂಬಸ್ಥರನ್ನು ಕಾಣಲು ಹೊರಟಿದ್ದಾರೆ.