ಗಸ್ತು ಪೂರ್ಣಗೊಳಿಸಿ ಮರಳಿದ ‘ವೈರಿಯ ಹಂತಕ’ ಐಎನ್‌ಎಸ್‌ ಅರಿಹಂತ್‌

0
214

ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ ಮೊದಲ ‘ದಾಳಿ ತಡೆ ಗಸ್ತ’ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ನವದೆಹಲಿ: ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ ಮೊದಲ ‘ದಾಳಿ ತಡೆ ಗಸ್ತ’ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 

ಮೊದಲ ಸುತ್ತು ಪೂರ್ಣಗೊಳಿಸಿ ಹಿಂದಿರುಗಿದ ಅರಿಹಂತ್‌ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಜಲಾಂತರ್ಗಾಮಿಯ ಗಸ್ತು ಪೂರ್ಣಗೊಂಡದ್ದು ಯಾವಾಗ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಸುಮಾರು ಮೂರು ದಶಕಗಳ ಗೋಪ್ಯ ಸಂಶೋಧನೆಯ ಬಳಿಕ ಐಎನ್‌ಎಸ್‌ ಅರಿಹಂತ್‌ ರೂಪುಗೊಂಡಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ಜಲಾಂತರ್ಗಾಮಿಯನ್ನು ಸಾಗರಕ್ಕೆ ಇಳಿಸಲಾಗಿತ್ತು. ಇದನ್ನು ಸೇವೆಗೆ ಸೇರಿಸಿಕೊಂಡಿರುವ ವಿವರವನ್ನು ಈವರೆಗೆ ಬಹಿರಂಗಪಡಿಸಿಲ್ಲ. 

ಅನುಕೂಲ ಏನು?

ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ನೀತಿಯನ್ನು ಭಾರತ ಅನುಸರಿಸುತ್ತಿದೆ. ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾ ಅಣ್ವಸ್ತ್ರಗಳನ್ನು ಹೊಂದಿವೆ ಮತ್ತು ಈ ದೇಶಗಳ ಜತೆಗೆ ಗಡಿ ಹಾಗೂ ಇತರ ವಿಚಾರಗಳಲ್ಲಿ ಆಗಾಗ ಬಿಕ್ಕಟ್ಟುಗಳು ಎದುರಾಗುತ್ತಲೇ ಇವೆ. ಒಂದು ವೇಳೆ, ಯಾವುದಾದರೂ ದೇಶ ನಮ್ಮ ಮೇಲೆ ಅಣ್ವಸ್ತ್ರ ದಾಳಿ ನಡೆಸಿದರೆ, ನಮ್ಮ ಅಣ್ವಸ್ತ್ರಗಳು ನಾಶವಾದರೆ, ಸಾಗರ ತಳದಲ್ಲಿ ಯಾರ ಕಣ್ಣಿಗೂ ಬೀಳದೆ ಅಡಗಿರುವ ಈ ಜಲಾಂತರ್ಗಾಮಿಯಿಂದ ಪ್ರತಿದಾಳಿ ನಡೆಸಲು ಸಾಧ್ಯ. ಭೂಮಿ ಮತ್ತು ಆಕಾಶದಿಂದ ದಾಳಿ ನಡೆಸುವ ವ್ಯವಸ್ಥೆಯನ್ನು ವೈರಿಗಳು ಪತ್ತೆ ಹಚ್ಚುವುದು ಸುಲಭ. ಆದರೆ ಜಲಾಂತರ್ಗಾಮಿಯನ್ನು ಅಷ್ಟು ಸುಲಭದಲ್ಲಿ ಗುರುತಿಸಲಾಗದು. 

ಹೆಸರಿಗೆ ತಕ್ಕ ಹಾಗೆಯೇ ಐಎನ್‌ಎಸ್‌ ಅರಿಹಂತ್‌ ಭಾರತದ 130 ಕೋಟಿ ಜನರನ್ನು ವಿದೇಶಿ ದಾಳಿಯಿಂದ ರಕ್ಷಿಸಲಿದೆ. ಈ ಪ್ರದೇಶದಲ್ಲಿ ಶಾಂತಿ ನೆಲೆಸಲು ನೆರವಾಗಲಿದೆ

ನರೇಂದ್ರ ಮೋದಿ, ಪ್ರಧಾನಿ