ಗಣೇಶ ಮೂರ್ತಿ ಪ್ರತಿಷ್ಠಾಪನೆ ಒಂದು ತಿಂಗಳಿಗೆ ಸೀಮಿತ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ

0
617

ಚೌತಿ ಹಬ್ಬದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒಂದು ತಿಂಗಳ ಕಾಲಮಿತಿ ಸೀಮಿತಗೊಳಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

ಬೆಂಗಳೂರು: ಚೌತಿ ಹಬ್ಬದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒಂದು ತಿಂಗಳ ಕಾಲಮಿತಿ ಸೀಮಿತಗೊಳಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. 

ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡಲಾಗುತ್ತದೆ. ಆದರೆ ಇದನ್ನು ಒಂದು ತಿಂಗಳು ಮಾತ್ರ ಆಚರಿಸಬೇಕು. ಒಂದು ತಿಂಗಳಿಗಿಂತ ಹೆಚ್ಚು ಅವಧಿಗೆ ಆಚರಣೆ ನಡೆಯದಂತೆ ಜಿಲ್ಲಾಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವರ್ಷಗಟ್ಟಲೆ ಹಬ್ಬ ಮಾಡುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಬೇಕು. ಅಕ್ಟೋಬರ್‌ ತಿಂಗಳಿನಲ್ಲಿ ಯಾರಾದರೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. 

”ಸೆಪ್ಟೆಂಬರ್‌ ನಂತರ ಕೆರೆ, ಕಲ್ಯಾಣಿ ಮೊದಲಾದ ಜಲಮೂಲಗಳನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಲಿದೆ. ಒಂದು ತಿಂಗಳು ವಿಸರ್ಜನೆ ಮಾಡಿದ ಮೂರ್ತಿಗಳನ್ನು ಹೊರತೆಗೆದು ಜಲಮೂಲಗಳನ್ನು ಶುಚಿಗೊಳಿಸಲಾಗುತ್ತದೆ. ಈ ವೇಳೆ ಮತ್ತೆ ಮೂರ್ತಿ ವಿಸರ್ಜನೆಗೆ ಅವಕಾಶ ಕೊಡಲು ಸಾಧ್ಯವಿಲ್ಲ,” ಎಂದು ಮಂಡಳಿ ತಿಳಿಸಿದೆ.