ಖೇಲ್​ರತ್ನಕ್ಕೆ ಭಜರಂಗ್ ಹೆಸರು: ಆಯ್ಕೆ ಸಮಿತಿಯಿಂದ ಅವಿರೋಧ ನಾಮನಿರ್ದೇಶನ

0
32

ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ವಿಶ್ವ ನಂ.1 ಕುಸ್ತಿಪಟು ಭಜರಂಗ್ ಪೂನಿಯಾ,
ಆಗಸ್ಟ್ 16 ರ ಶುಕ್ರವಾರ ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ನವದೆಹಲಿ: ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್  ಸ್ವರ್ಣ ಪದಕ ವಿಜೇತ ವಿಶ್ವ ನಂ.1 ಕುಸ್ತಿಪಟು ಭಜರಂಗ್ ಪೂನಿಯಾ, ಆಗಸ್ಟ್ 16 ರ  ಶುಕ್ರವಾರ ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಕಳೆದ ವರ್ಷ ಇದೇ ಪ್ರಶಸ್ತಿಗೆ ಇವರ ಹೆಸರನ್ನು ಪರಿಗಣಿಸದೇ ಇದ್ದ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರುವ ಬೆದರಿಕೆ ಒಡ್ಡಿದ್ದ ಭಜರಂಗ್ ಈ ಬಾರಿ 12 ಸದಸ್ಯರ ಆಯ್ಕೆ ಸಮಿತಿಯಿಂದ ಅವಿರೋಧವಾಗಿ ಖೇಲ್​ರತ್ನಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

ಪ್ರಶಸ್ತಿ ಆಯ್ಕೆ ಸಮಿತಿಯ ಎರಡು ದಿನಗಳ ಸಭೆ ಶುಕ್ರವಾರ ಆರಂಭಗೊಂಡಿತು. ಸಭೆಯ ಮೊದಲ ದಿನವೇ ಭಜರಂಗ್ ಪೂನಿಯಾರ ಹೆಸರನ್ನು ಖೇಲ್​ರತ್ನಕ್ಕೆ ಅಂತಿಮ ಮಾಡಲಾಯಿತು. ನಿವೃತ್ತ ನ್ಯಾಯಮೂರ್ತಿ ಮುಕುಂದಕಮ್ ಶರ್ಮ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಫುಟ್​ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ, ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್, ಬಾಕ್ಸರ್ ಮೇರಿ ಕೋಮ್ಂಥ ಖ್ಯಾತರು ಸದಸ್ಯರಾಗಿದ್ದಾರೆ.

ಭಜರಂಗ್ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ. ಅವರ ಹೆಸರು ಅವಿರೋಧ ಆಯ್ಕೆಯಾಗಿತ್ತು’ ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅದಲ್ಲದೆ, ಶನಿವಾರದ ವೇಳೆಗೆ ಖೇಲ್​ರತ್ನಕ್ಕೆ ಇನ್ನೊಬ್ಬರ ಹೆಸರು ಸೂಚಿಸಲ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಅದರೊಂದಿಗೆ ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರನ್ನು ಅಂತಿಮ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಏಷ್ಯಾಡ್ ಹಾಗೂ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆದ್ದ ನಿರ್ವಹಣೆಯ ನಡುವೆಯೂ ಖೇಲ್​ರತ್ನ ಪ್ರಶಸ್ತಿಗೆ ತಮ್ಮನ್ನು ಪರಿಗಣಿಸದೇ ಇದ್ದ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರುವುದಾಗಿ ಭಜರಂಗ್ ಹೇಳಿದ್ದರು. ಕೊನೆಗೆ ಅವರು ಗುರು, ಒಲಿಂಪಿಕ್ ಪದಕ ವಿಜೇತ ರೆಸ್ಲರ್ ಯೋಗೇಶ್ವರ್ ದತ್ ಮಧ್ಯಪ್ರವೇಶದಿಂದಾಗಿ ಕೋರ್ಟ್ ಮೆಟ್ಟಿಲೇರುವ ನಿರ್ಧಾರದಿಂದ ಹಿಂದೆ ಸರಿದಿದ್ದರು.

‘ನನ್ನ ಕೆಲಸ ಕಠಿಣ ತರಬೇತಿ ಮಾಡುವುದು ಹಾಗೂ ಬಲಿಷ್ಠ ವಾಗಿ ಸ್ಪರ್ಧೆ ಮಾಡುವುದು. ನನ್ನ ಗಮನವೆಲ್ಲವೂ ಪ್ರಶಸ್ತಿಗಿಂತ ಹೆಚ್ಚಾಗಿ ನನ್ನ ನಿರ್ವಹಣೆ ಮೇಲೆ ಇರುತ್ತದೆ. ಆದರೆ, ಒಳ್ಳೆಯ ನಿರ್ವಹಣೆ ತೋರಿದ ನಡುವೆಯೂ ನಮ್ಮನ್ನು ಗಮನಿಸಿದೇ ಇದ್ದಾಗ ಬೇಸರವಾಗುತ್ತದೆ. ಈ ಪ್ರಶಸ್ತಿಗೆ ಅರ್ಹವಾದ ಸಾಧನೆಗಳನ್ನು ನಾನು ಮಾಡಿದ್ದೇನೆ’ ಎಂದು ವಿಶ್ವ ಚಾಂಪಿಯನ್​ಷಿಪ್​ಗಾಗಿ ಜಾರ್ಜಿಯಾ ದೇಶದಲ್ಲಿ ತರಬೇತಿ ಪಡೆಯುತ್ತಿರುವ ಭಜರಂಗ್ ಪೂನಿಯಾ ಹೇಳಿದ್ದಾರೆ. ಭಜರಂಗ್ ಮುಂದಿನ ವರ್ಷದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಸ್ವರ್ಣ ಗೆಲ್ಲಬಲ್ಲ ಭಾರತದ ಫೇವರಿಟ್ ಆಗಿದ್ದಾರೆ.

ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ರಾಷ್ಟ್ರಪತಿ, ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಖೇಲ್​ರತ್ನ ಪದಕ, ಪ್ರಮಾಣ ಪತ್ರ, 7.5 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

ಖೇಲ್​ರತ್ನ ಪ್ರಶಸ್ತಿಗೆ ಭಜರಂಗ್ ಹೆಸರನ್ನು ಕ್ರೀಡಾ ಸಚಿವಾಲಯ ಒಪ್ಪಿದಲ್ಲಿ, ಈ ಗೌರವ ಪಡೆದ ಭಾರತದ ನಾಲ್ಕನೇ ರೆಸ್ಲರ್ ಎನಿಸಲಿದ್ದಾರೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್, ಯೋಗೇಶ್ವರ್ ದತ್ ಹಾಗೂ ಸಾಕ್ಷಿ ಮಲಿಕ್ ಈ ಗೌರವ ಪಡೆದಿದ್ದರು.