ಖೇಲೋ ಇಂಡಿಯಾ ಸ್ಕಾಲರ್‌ಶಿಪ್‌ಗೆ 734 ಯುವ ಕ್ರೀಡಾಪಟುಗಳು ಆಯ್ಕೆ

0
18

ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಹೀಗಾಗಿ ಕ್ರೀಡಾ ಇಲಾಖೆಯಡಿ ಬರುವ ಭಾರತೀಯ ಕ್ರೀಡಾ ಪ್ರಾಧಿಕಾರ ( ಎಸ್‌ಎಐ ) ಯುವ ಕ್ರೀಡಾಪಟುಗಳಿಗೆ ಸ್ಕಾಲರ್‌ಶಿಪ್ ನೀಡಲು 734 ಮಂದಿಯನ್ನು ಆಯ್ಕೆ ಮಾಡಿದೆ.

ಹೊಸದಿಲ್ಲಿ: ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಹೀಗಾಗಿ ಕ್ರೀಡಾ ಇಲಾಖೆಯಡಿ ಬರುವ ಭಾರತೀಯ ಕ್ರೀಡಾ ಪ್ರಾಧಿಕಾರ ( ಎಸ್‌ಎಐ ) ಯುವ ಕ್ರೀಡಾಪಟುಗಳಿಗೆ ಸ್ಕಾಲರ್‌ಶಿಪ್ ನೀಡಲು 734 ಮಂದಿಯನ್ನು ಆಯ್ಕೆ ಮಾಡಿದೆ. 

ಖೇಲೋ ಇಂಡಿಯಾ ಟ್ಯಾಲೆಂಟ್ ಐಡೆಂಟಿಫಿಕೇಷನ್ ಡೆವಲೆಪ್‌ಮೆಂಟ್ ಯೋಜನೆಯಡಿ ಭಾರತದ ಕ್ರೀಡಾ ಪ್ರಾಧಿಕಾರ ಈ ಪಟ್ಟಿಯನ್ನು ಅಂತಿಮ ಪಡಿಸಿದ್ದು, 385 ಯುವಕರು ಹಾಗೂ 349 ಯುವತಿಯರಿಗೆ ವಿದ್ಯಾರ್ಥಿ ವೇತನ ನೀಡಲಿದೆ. ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರನ್ನು ಒಳಗೊಂಡ ಎಸ್‌ಎಐನ ಉನ್ನತ ಮಟ್ಟದ ಸಮಿತಿ 734 ಯುವ ಕ್ರೀಡಾಪಟುಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಇವರಿಗೆ ವೇತನ ಸಿಗಲಿದ್ದು, ಜತೆಗೆ ಖೇಲೋ ಇಂಡಿಯಾದ ಮಾನ್ಯತೆ ಪಡೆದ ಅಕಾಡೆಮಿಗಳಲ್ಲಿ ಹಾಗೂ 21 ಇತರೆ ಅಕಾಡೆಮಿಗಳಲ್ಲಿ ಉಚಿತ ತರಬೇತಿ ಪಡೆಯಬಹುದು. 

ಕ್ರೀಡಾಪಟುಗಳಿಗೆ ವಾರ್ಷಿಕವಾಗಿ 1.2 ಲಕ್ಷ ರೂ. ದೊರೆಯಲಿದ್ದು, ಈ ಪೈಕಿ ಮೂರು ತಿಂಗಳಿಗೊಮ್ಮೆ 30 ಸಾವಿರ ರೂ. ಹಣ ಪಡೆಯಲಿದ್ದಾರೆ. ಆಟಗಾರರ ಖರ್ಚು ವೆಚ್ಚಗಳಿಗೆ, ಚಿಕ್ಕ ಪುಟ್ಟ ಅಪಘಾತಗಳಿಗೆ ಚಿಕಿತ್ಸೆ ಪಡೆಯಲು, ತಮ್ಮ ಕುಟುಂಬದವರನ್ನು ಭೇಟಿ ಮಾಡಲು ಹಾಗೂ ತಮ್ಮ ಖಾಸಗಿ ಪ್ರಯಾಣದ ಖರ್ಚುಗಳನ್ನು ನೋಡಿಕೊಳ್ಳಲು ಸಹಾಯವಾಗುತ್ತದೆ. ಇನ್ನು, ಮಾನ್ಯತೆ ಪಡೆದ ಅಕಾಡೆಮಿಗಳು ಅಥ್ಲೀಟ್‌ಗಳ ತರಬೇತಿ, ಬೋರ್ಡಿಂಗ್ ಹಾಗೂ ಪಂದ್ಯಾವಳಿಯ ಖರ್ಚುಗಳನ್ನು ನೋಡಿಕೊಳ್ಳುತ್ತದೆ. 

ಆದರೆ, ಅಕಾಡೆಮಿ ಹಾಗೂ ಆಟಗಾರರ ಪ್ರದರ್ಶನ ವಿಮರ್ಶೆಗೊಳಲ್ಪಡಲಿದ್ದು, ಕಳಪೆ ಪ್ರದರ್ಶನ ನೀಡಿದ ಅಕಾಡೆಮಿಗಳನ್ನು ಖೇಲೋ ಇಂಡಿಯಾದ ಪಟ್ಟಿಯಿಂದ ಹೊರತೆಗೆಯುವ ಸಾಧ್ಯತೆಯಿದೆ. ಹಾಗೂ, ಅಗತ್ಯ ಗುಣಮಟ್ಟದ ಪ್ರದರ್ಶನ ನೀಡದ ಅಥ್ಲೀಟ್‌ಗಳನ್ನು ಹೊರಹಾಕಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ.