ಖೇಲೋ ಇಂಡಿಯಾದಡಿ ಕ್ರೀಡಾಳುಗಳಿಗೆ ₹5 ಲಕ್ಷ ವಿದ್ಯಾರ್ಥಿವೇತನ

0
21

ಬೇರೆ ಬೇರೆ ಕ್ರೀಡೆಗಳಲ್ಲಿ ಗುರುತಿಸಿಕೊಂಡಿರುವ 1000 ಕ್ರೀಡಾಪಟುಗಳಿಗೆ ಅಖಿಲಭಾರತ ಮಟ್ಟದ ವಿದ್ಯಾರ್ಥಿ ವೇತನ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.

ಖೇಲೋ ಇಂಡಿಯಾ ಕಾರ್ಯಕ್ರಮ’ದ ಅಡಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಆಯ್ಕೆಯಾದ ಪ್ರತಿ ಕ್ರೀಡಾಪಟು ಒಂದು ವರ್ಷಕ್ಕೆ ₹ 5 ಲಕ್ಷ ಮೌಲ್ಯದ ವಿದ್ಯಾರ್ಥಿವೇತನವನ್ನು ಸತತ ಎಂಟು ವರ್ಷಗಳ ಕಾಲ ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

‘2017–18 ರಿಂದ 2019–20ರ ಅವಧಿಗೆ ₹ 1,756 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ’ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ‘ಇದು ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ನಿರ್ಣಾಯಕ ಘಟ್ಟವಾಗಲಿದೆ’ ಎಂದು ಹೇಳಿಕೆ ತಿಳಿಸಿದೆ.

ಕ್ರೀಡೆಯನ್ನು ವೈಯಕ್ತಿಕ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಸಾಧನವನ್ನಾಗಿ ಬಳಸುವ ಉದ್ದೇಶ ಪುನರ್‌ರಚಿತ ಖೇಲೋ ಇಂಡಿಯಾ ಕಾರ್ಯಕ್ರಮದ ಹಿಂದಿದೆ. ಮೂಲಸೌಕರ್ಯ, ಸಮುದಾಯ ಕ್ರೀಡೆ, ಪ್ರತಿಭಾವಂತರನ್ನು ಗುರುತಿಸುವುದು, ತರಬೇತಿ, ಸ್ಪರ್ಧೆಯ ರೂಪುರೇಷೆ ಮತ್ತು ಕ್ರೀಡಾ ಅರ್ಥವ್ಯವಸ್ಥೆ ಸೇರಿದಂತೆ ಕ್ರೀಡೆಯ ಸಂಪೂರ್ಣ ವ್ಯವಸ್ಥೆಯ ಮೇಲೆ ಈ ಯೋಜನೆ ಪ್ರಭಾವ ಬೀರಲಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಇದೊಂದು ಅಭೂತಪೂರ್ವ ನಿರ್ಧಾರ ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹೇಳಿದೆ.

‘ಪುನರ್‌ರಚಿತ ಕಾರ್ಯಕ್ರಮವು ದೇಶದಾದ್ಯಂತ 20 ವಿಶ್ವವಿದ್ಯಾಲಯಗಳನ್ನು ಉತೃಷ್ಟ ಕ್ರೀಡಾ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡಲಿದೆ. ಇದು ಪ್ರತಿಭಾವಂತ ಕ್ರೀಡಾಪಟುಗಳಲ್ಲಿ ಸ್ಪರ್ಧಾತ್ಮಕ ಕ್ರೀಡೆಯೊಂದಿಗೆ ಶಿಕ್ಷಣದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲೂ ಅವಕಾಶ
ಕಲ್ಪಿಸಲಿದೆ’ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ಪ್ರಮುಖಾಂಶಗಳು:-

# ವಿದ್ಯಾರ್ಥಿ ವೇತನಕ್ಕಾಗಿ ಪ್ರತಿ ವರ್ಷ ಒಂದು ಸಾವಿರ ವಿದ್ಯಾರ್ಥಿಗಳು ಆಯ್ಕೆಗೊಳ್ಳಲಿದ್ದಾರೆ.

# ಆಯ್ಕೆಯಾದ ಕ್ರೀಡಾಪಟುಗಳಿಗೆ ಸತತವಾಗಿ 8 ವರ್ಷಗಳ ಕಾಲ 5 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನ ದೊರೆಯಲಿದೆ.

1756 ಕೋಟಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಸತತ 8 ವರ್ಷಗಳ ಕಾಲ ಪ್ರತಿ ವರ್ಷ ವಿದ್ಯಾರ್ಥಿ ವೇತನ ದೊರೆಯಲಿದೆ.