ಖಾಸಗಿ ಶಾಲೆಗಳಲ್ಲಿ ಬಡವರಿಗೆ ಕುಸಿದ ಅವಕಾಶ (ಆರ್‌ಟಿಇ: 3 ಸಾವಿರಕ್ಕೂ ಕಡಿಮೆ ಸೀಟುಗಳು ಮಾತ್ರ

0
467

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಅವಕಾಶ ವಂಚಿತರ ಮಕ್ಕಳಿಗೆ ಈ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ 3,000 ಕ್ಕೂ ಕಡಿಮೆ ಸೀಟುಗಳು ಮಾತ್ರ ಸಿಗುವ ಸಾಧ್ಯತೆ ಇದೆ.

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಅವಕಾಶ ವಂಚಿತರ ಮಕ್ಕಳಿಗೆ ಈ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ 3,000 ಕ್ಕೂ ಕಡಿಮೆ ಸೀಟುಗಳು ಮಾತ್ರ ಸಿಗುವ ಸಾಧ್ಯತೆ ಇದೆ.

ಖಾಸಗಿ ಶಾಲೆಗಳಲ್ಲಿ ಶೇ 25 ರಷ್ಟು ಸೀಟುಗಳನ್ನು ಮೀಸಲಿಡಲು ಅವಕಾಶ ಕಲ್ಪಿಸಿದ್ದ ಶಿಕ್ಷಣ ಹಕ್ಕು ಕಾಯ್ದೆಯ 12 (1) ಸಿ ಸೆಕ್ಷನ್‌ ಅನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಇದರಿಂದ ಅವಕಾಶ ವಂಚಿತರು ತಮ್ಮ ಮಕ್ಕಳನ್ನು ಈ ಹಿಂದಿನಂತೆ ತಮ್ಮ ಇಚ್ಛೆಯ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಸಾಧ್ಯವಿಲ್ಲ. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಎಜುಕೇಷನ್‌ ರೈಟ್‌ ಟ್ರಸ್ಟ್‌ ನ್ಯಾಯಾಲಯದ ಮೆಟ್ಟಿಲು ಏರಿದೆ.

ತಿದ್ದುಪಡಿಗೊಂಡ ಕಾಯ್ದೆಯ ಪ್ರಕಾರ, ಕಂದಾಯ ಗ್ರಾಮ, ನಗರ ಸ್ಥಳೀಯ ವಾರ್ಡ್‌, ಕಾರ್ಪೊರೇಷನ್‌ ವಾರ್ಡ್‌ಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ನೆರೆಹೊರೆ ಶಾಲೆಗಳಿದ್ದರೆ ಮಕ್ಕಳನ್ನು ಅಲ್ಲಿಯೇ ಸೇರಿಸಬೇಕು. ಈ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಿದ್ದರೆ, ಆರ್‌ಟಿಇ ಅಡಿ ಮಕ್ಕಳಿಗೆ ಪ್ರವೇಶ ಅವಕಾಶವಿಲ್ಲ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇಲ್ಲದ ಕಡೆಗಳಲ್ಲಿ ಮಾತ್ರ ಖಾಸಗಿ ಶಾಲೆಗಳನ್ನು ಗುರುತಿಸಿ, ಆರ್‌ಟಿಇ ಅಡಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.

‘ರಾಜ್ಯದಲ್ಲಿ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸುಮಾರು 3 ಸಾವಿರದಷ್ಟು ಸೀಟುಗಳನ್ನು ಗುರುತಿಸಲಾಗಿದೆ. ಅಂತಿಮ ಸಂಖ್ಯೆ ಇದೇ 15 ರ ವೇಳೆಗೆ ಗೊತ್ತಾಗುತ್ತದೆ. ಈ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ನೆರೆಹೊರೆ ಅನುದಾನಿತ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಆನ್‌ಲೈನ್‌ನಲ್ಲಿ ನೆರೆಹೊರೆ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಕ್ಕಳನ್ನು ನೆರೆ ಹೊರೆ ಶಾಲೆಗಳಲ್ಲಿಯೇ ಪ್ರವೇಶ ಪಡೆಯಬೇಕಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಸ್‌.ಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ವೇಳೆ ಆದೇಶ ಉಲ್ಲಂಘಿಸಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಿದರೆ, ಸರ್ಕಾರ ಅಂತಹ ಶಾಲೆಗಳಿಗೆ ಆರ್‌ಟಿಇ ಅಡಿ ಹಣ ಮರು ಪಾವತಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಯಾವ ಶಾಲೆಗಳನ್ನು ಸರ್ಕಾರ ಗುರುತಿಸುತ್ತದೆಯೊ ಅಲ್ಲಿಗೆ ಮಾತ್ರ ವಿದ್ಯಾರ್ಥಿಗಳನ್ನು ದಾಖಲಿಸಬೇಕು ಎಂದು ಹೇಳಿದರು.

ಪೋಷಕರ ಹಿಂಜರಿಕೆ: ಸರ್ಕಾರಿ ಶಾಲೆಗಳ ಗುಣಮಟ್ಟ ಚೆನ್ನಾಗಿಲ್ಲ. ಇಂಗ್ಲಿಷ್‌ ಮಾಧ್ಯಮವನ್ನೂ ಆರಂಭಿಸಿಲ್ಲ. ಇಂತಹ ಸ್ಥಿತಿಯಲ್ಲಿ ಬಡ ವರ್ಗದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹೇಗೆ ಸಾಧ್ಯ. ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ತಪ್ಪಿಸಲು ಸರ್ಕಾರ ಈ ಮಾರ್ಗ ಅನುಸರಿಸಿದೆ ಎಂದು ಕೆಲವು ಪೋಷಕರು ದೂರಿದ್ದಾರೆ. 

ಖಾಸಗಿ ಶಾಲೆಗಳಲ್ಲಿ ಶೇ 25 ರಷ್ಟು ಮಕ್ಕಳಿಗೆ ಆರ್‌ಟಿಇ ಅಡಿ ದಾಖಲು ಮಾಡುವ ಅವಕಾಶ ರದ್ದು ಮಾಡಿರುವುದನ್ನು ಪ್ರಶ್ನಿಸಿ ಎಜುಕೇಷನ್‌ ರೈಟ್‌ ಟ್ರಸ್ಟ್‌ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು ಏಪ್ರೀಲ್ 11 ರ ಗುರುವಾರ ತೀರ್ಪು ಹೊರ ಬೀಳಲಿದೆ.

ಈ ಹಿಂದೆ ಇದ್ದಂತೆ ಅವಕಾಶ ಇದ್ದರೆ ಅವಕಾಶ ವಂಚಿತರ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಪೋಷಕರ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ನ್ಯಾಯಾಲಯದಲ್ಲಿ ವಾದ– ಪ್ರತಿವಾದ ಪೂರ್ಣಗೊಂಡಿದೆ ಎಂದು ಆರ್‌ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹರಾವ್‌ ತಿಳಿಸಿದರು.

# ಆನ್‌ಲೈನ್ ಮೂಲಕ ಇಲ್ಲಿಯವರೆಗೆ 12,350 ಅರ್ಜಿಗಳು ಸಲ್ಲಿಕೆ

# 2018 ರಲ್ಲಿ ಖಾಸಗಿ, ಅನುದಾನಿತ ಶಾಲೆಗಳಲ್ಲಿ 1.15 ಲಕ್ಷ ವಿದ್ಯಾರ್ಥಿಗಳು ಆರ್‌ಟಿಇ ಅಡಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದರು

# ಕಳೆದ ಬಾರಿ ಅನುದಾನಿತ ಶಾಲೆಗಳಲ್ಲಿ  10 ಸಾವಿರ ಆರ್‌ಟಿಇ ಸೀಟುಗಳು ಭರ್ತಿಯಾಗದೇ ಉಳಿದಿದ್ದವು.