ಖಾಸಗಿ ವಿವಿಗಳನ್ನು ನಿಯಂತ್ರಿಸಲು ಸುಗ್ರೀವಾಜ್ಞೆ : ಉತ್ತರಪ್ರದೇಶ ಸರ್ಕಾರ

0
11

ಖಾಸಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಲ್ಲಿ ‘ದೇಶ ವಿರೋಧಿ ಚಟುವಟಿಕೆ’ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುವಾಗುವಂಥ ‘ಉತ್ತರಪ್ರದೇಶ ಖಾಸಗಿ ವಿಶ್ವವಿದ್ಯಾಲಯ ಸುಗ್ರೀವಾಜ್ಞೆ–2019’ಕ್ಕೆ ಸಚಿವ ಸಂಪುಟವು ಜೂನ್ 19 ರ ಬುಧವಾರ ಅನುಮೋದನೆ ನೀಡಿದೆ.

ಲಖನೌ: ಖಾಸಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಲ್ಲಿ ‘ದೇಶ ವಿರೋಧಿ ಚಟುವಟಿಕೆ’ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುವಾಗುವಂಥ ‘ಉತ್ತರಪ್ರದೇಶ ಖಾಸಗಿ ವಿಶ್ವವಿದ್ಯಾಲಯ ಸುಗ್ರೀವಾಜ್ಞೆ–2019’ಕ್ಕೆ ಸಚಿವ ಸಂಪುಟವು  ಜೂನ್ 19 ರ ಬುಧವಾರ ಅನುಮೋದನೆ ನೀಡಿದೆ.

ಸರ್ಕಾರದ ಈ ಕ್ರಮವನ್ನು ಅನೇಕರು ವಿರೋಧಿಸಿದ್ದು, ‘ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ’ ಎಂದು ಆರೋಪಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಸುಗ್ರೀವಾಜ್ಞೆಯ ಪ್ರಕಾರ, ‘ದೇಶ ವಿರೋಧಿ ಚಟುವಟಿಕೆಗಳಿಗಾಗಿ ತಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್‌ಅನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂಬ ಪ್ರಮಾಣಪತ್ರವನ್ನು ಪ್ರತಿಯೊಂದು ಖಾಸಗಿ ವಿಶ್ವವಿದ್ಯಾಲಯದವರು ನೀಡಬೇಕಾಗುತ್ತದೆ.

‘ವಿಶ್ವವಿದ್ಯಾಲಯಗಳು ದೇಶಪ್ರೇಮವನ್ನು ಬೆಳೆಸಬೇಕು. ಅಲ್ಲಿ ದೇಶವಿರೋಧಿ ಚಟುವಟಿಕೆ ನಡೆಸಲು ಬಿಡುವುದಿಲ್ಲ’ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಹೇಳಿದ್ದಾರೆ.

ಸುಗ್ರೀವಾಜ್ಞೆಯಲ್ಲಿ ‘ದೇಶ ವಿರೋಧಿ ಚಟುವಟಿಕೆಯ’ ಸ್ಪಷ್ಟ ವ್ಯಾಖ್ಯಾನ ಇಲ್ಲದಿರುವುದರಿಂದ ಇದರ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಹಕ್ಕುಗಳ ರಕ್ಷಣೆ ಕುರಿತ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ‘ಸರ್ಕಾರವು ಯಾವ ಚಟುವಟಿಕೆಯನ್ನಾದರೂ ದೇಶ ವಿರೋಧಿ ಎಂದು ಘೋಷಿಸಿ, ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಲಖನೌ ಮೂಲದ ಶಿಕ್ಷಣ ತಜ್ಞರೊಬ್ಬರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

‘ವಿಶ್ವವಿದ್ಯಾಲಯಗಳಲ್ಲಿ ಅನೇಕ ವಿವಾದಾತ್ಮಕ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇಲ್ಲಿ ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.