ಖಾಸಗಿ ನೌಕರರ ಪಿಂಚಣಿ ಹೆಚ್ಚಳ : ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದಿಂದ ಮಹತ್ವದ ತೀರ್ಪು

0
548

ಸುಪ್ರೀಂಕೋರ್ಟ್‌ ನೀಡಿರುವ ಮಹತ್ವದ ತೀರ್ಪಿನಿಂದಾಗಿ, ಖಾಸಗಿ ವಲಯದಲ್ಲಿ ದುಡಿಯುವ ಉದ್ಯೋಗಿಗಳ ಪಿಂಚಣಿ ಮೊತ್ತವು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ.

ನವದೆಹಲಿ: ಸುಪ್ರೀಂಕೋರ್ಟ್‌ ನೀಡಿರುವ ಮಹತ್ವದ ತೀರ್ಪಿನಿಂದಾಗಿ, ಖಾಸಗಿ ವಲಯದಲ್ಲಿ  ದುಡಿಯುವ ಉದ್ಯೋಗಿಗಳ ಪಿಂಚಣಿ ಮೊತ್ತವು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ.

ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು (ಎಸ್‌ಎಲ್‌ಪಿ) ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತ ಮತ್ತು ಸಂಜೀವ್‌ ಖನ್ನಾ ಅವರನ್ನು ಒಳಗೊಂಡಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

ನಿವೃತ್ತರಿಗೆ ಅವರು ಪಡೆಯುವ ಪೂರ್ಣ ಪ್ರಮಾಣದ ವೇತನ ಆಧರಿಸಿ ಪಿಂಚಣಿ ನೀಡಬೇಕು ಎಂದು ಹೈಕೋರ್ಟ್‌, ‘ಇಪಿಎಫ್‌ಒ’ಗೆ ಆದೇಶಿಸಿತ್ತು.  ಪ್ರತಿ ತಿಂಗಳ 15 ಸಾವಿರ ಗರಿಷ್ಠ ವೇತನ ಆಧರಿಸಿ ಪಿಂಚಣಿ ಲೆಕ್ಕಹಾಕುವುದು ಸರಿಯಲ್ಲ ಎಂದು ಸೂಚಿಸಿತ್ತು.  ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ‘ಇಪಿಎಫ್‌ಒ’ ಮೇಲ್ಮನವಿ ಸಲ್ಲಿಸಿತ್ತು.

ಕೇಂದ್ರ ಸರ್ಕಾರವು 1995ರಲ್ಲಿ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್‌) ಜಾರಿಗೊಳಿಸಿತ್ತು. ಈ ಯೋಜನೆಯಡಿ ಪಾವತಿಸುವ ಉದ್ಯೋಗದಾತ ಮತ್ತು ಉದ್ಯೋಗಿಗಳ ತಲಾ ಕೊಡುಗೆಯ ಸಂಬಳದ ಗರಿಷ್ಠ ಮಿತಿಯನ್ನು ಆರಂಭದಲ್ಲಿ  ₹ 6,500ಕ್ಕೆ ಮಿತಿಗೊಳಿಸಲಾಗಿತ್ತು.

ಪೂರ್ಣ ಪ್ರಮಾಣದ ವೇತನ ಆಧರಿಸಿ ಪಿಂಚಣಿ ಯೋಜನೆಗೆ ಕೊಡುಗೆ ನೀಡುವ ಉದ್ಯೋಗಿಗಳ ಮನವಿಯನ್ನು ಸ್ವೀಕರಿಸಬೇಕು ಎಂದು ಸುಪ್ರೀಂಕೋರ್ಟ್‌ 2016ರ ಅಕ್ಟೋಬರ್‌ನಲ್ಲಿ ‘ಇಪಿಎಫ್‌ಒ’ಗೆ ನಿರ್ದೇಶನ ನೀಡಿತ್ತು.

ಉದ್ಯೋಗಿಗಳ ಭವಿಷ್ಯ ನಿಧಿ ನಿರ್ವಹಿಸುವ ಖಾಸಗಿ ಸಂಸ್ಥೆಗಳ ಟ್ರಸ್ಟ್‌ಗಳು ಈ ಉದ್ದೇಶಕ್ಕೆ ಬಾಕಿ ಮೊತ್ತ ನೀಡಲು ಸಿದ್ಧವಿದ್ದರೂ ‘ಇಪಿಎಫ್‌ಒ’ ಅದಕ್ಕೆ ಸಮ್ಮತಿಸಿರಲಿಲ್ಲ. ಉದ್ಯೋಗಿಗಳು ಒಂದು ವರ್ಷದ ಒಳಗೆ ತಮ್ಮ ಕೊಡುಗೆ ಹೆಚ್ಚಿಸಲು ಉದ್ಯೋಗದಾತರಿಗೆ ಮನವಿ ಸಲ್ಲಿಸಬೇಕು. 

ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಕೂಡ ಉದ್ಯೋಗಿಗಳ ನಿಲುವು ಬೆಂಬಲಿಸಿ ತೀರ್ಪು ನೀಡಿದ್ದವು. ಸುಪ್ರೀಂಕೋರ್ಟ್‌ನ ಈ ತೀರ್ಪು ಈ ಎಲ್ಲ ವಿವಾದಗಳನ್ನು ಅಂತಿಮವಾಗಿ ಇತ್ಯರ್ಥಪಡಿಸಿದಂತಾಗಿದೆ.

‘ಇಪಿಎಫ್‌ಒ’ ತಿದ್ದುಪಡಿ

2014ರಲ್ಲಿ ‘ಇಪಿಎಫ್‌ಒ’ ತಿದ್ದುಪಡಿ ತಂದು ಸಂಬಳದ ಗರಿಷ್ಠ ಮಿತಿಯನ್ನು 15 ಸಾವಿರಕ್ಕೆ ಹೆಚ್ಚಿಸಿತ್ತು. ಉದ್ಯೋಗಿ ಮತ್ತು ಉದ್ಯೋಗದಾತರಿಬ್ಬರ ಆಕ್ಷೇಪವಿಲ್ಲದಿದ್ದರೆ ವೇತನದ ಯಾವುದೇ ಪ್ರಮಾಣವನ್ನೂ ಪಿಂಚಣಿಗೆ ಕೊಡುಗೆಯಾಗಿ ನೀಡಲು ಅವಕಾಶ ಕಲ್ಪಿಸಿತ್ತು.

ಇದರ ಜತೆಗೆ, ಪೂರ್ಣ ವೇತನ ಆಧರಿಸಿದ ಪಿಂಚಣಿಗೆ ಪರಿಗಣಿಸುವ ವೇತನವು ಸೇವಾವಧಿಯ ಕೊನೆಯ ಐದು ವರ್ಷಗಳ ಸರಾಸರಿ ವೇತನವಾಗಿರುತ್ತದೆಯೇ ಹೊರತು, ಕೊನೆಯ ಒಂದು ವರ್ಷದ ಸರಾಸರಿ ವೇತನ ಆಗಿರುವುದಿಲ್ಲ ಎನ್ನುವ ನಿಬಂಧನೆ ವಿಧಿಸಿತ್ತು. ಇದರಿಂದಾಗಿ ಉದ್ಯೋಗಿಗಳ ಪಿಂಚಣಿ ಮೊತ್ತವು ಕಡಿಮೆಯಾಗಿತ್ತು.

ಕೇರಳ ಹೈಕೋರ್ಟ್‌ 2014ರ  ತಿದ್ದುಪಡಿಯನ್ನು ರದ್ದುಪಡಿಸಿ, ಕೊನೆಯ ವರ್ಷದಲ್ಲಿನ ತಿಂಗಳ ವೇತನದ ಸರಾಸರಿ ಆಧರಿಸಿ ಪಿಂಚಣಿ ಲೆಕ್ಕಹಾಕಬೇಕು ಎಂದು ತೀರ್ಪು ನೀಡಿತ್ತು.

ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ 12ರಷ್ಟನ್ನು ಉದ್ಯೋಗದಾತ ಮತ್ತು ಉದ್ಯೋಗಿಗಳ ಕೊಡುಗೆ ರೂಪದಲ್ಲಿ ಪಾವತಿಸಲಾಗು
ತ್ತಿದೆ. ಉದ್ಯೋಗದಾತರ ಕೊಡುಗೆಯಲ್ಲಿ ಶೇ 3.67ರಷ್ಟನ್ನು ಉದ್ಯೋಗಿಗಳ ಪಿಂಚಣಿ ನಿಧಿಗೆ (ಇಪಿಎಫ್‌) ಮತ್ತು ಶೇ 8.33ರಷ್ಟನ್ನು ಉದ್ಯೋಗಿಗಳ ಪಿಂಚಣಿ ಯೋಜನೆಗೆ (ಇಪಿಎಸ್) ಶೇ 8.33ರಂತೆ ನಿಗದಿಪಡಿಸಲಾಗಿದೆ.