ಖಾಸಗಿ ಕಂಪನಿಗಳಲ್ಲಿ ಶೇ. 75 ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು: ಮಹತ್ವದ ಕಾಯ್ದೆಗೆ ಆಂಧ್ರ ವಿಧಾನಸಭೆಯಲ್ಲಿ ಅಸ್ತು

0
43

ಖಾಸಗಿ ಕಂಪನಿಗಳಲ್ಲಿ ಸ್ಥಳೀಯರ ಪ್ರತಿಭಾವಂತ ಯುವಜನರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂಬುದು ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಇರುವ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸ್ಥಳೀಯ ಯುವಜನತೆಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಜಗನ್​ ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರದ ಮಹತ್ವದ ಕಾಯ್ದೆಗೆ ಆಂಧ್ರ ವಿಧಾನಸಭೆ ಅನುಮೋದನೆ ನೀಡಿದೆ.

ಅಮರಾವತಿ: ಖಾಸಗಿ ಕಂಪನಿಗಳಲ್ಲಿ ಸ್ಥಳೀಯರ ಪ್ರತಿಭಾವಂತ ಯುವಜನರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂಬುದು ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಇರುವ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸ್ಥಳೀಯ ಯುವಜನತೆಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಜಗನ್​ ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರದ ಮಹತ್ವದ ಕಾಯ್ದೆಗೆ ಆಂಧ್ರ ವಿಧಾನಸಭೆ ಅನುಮೋದನೆ ನೀಡಿದೆ.

ಈ ಮೂಲಕ ಖಾಸಗಿ ಕಂಪನಿಗಳಲ್ಲಿ ಶೇ. 75 ರಷ್ಟು ಉದ್ಯೋಗವನ್ನು ಸ್ಥಳೀಯ ಯುವಜನತೆಗೆ ಮೀಸಲಿಟ್ಟ ಮೊದಲ ರಾಜ್ಯ ಎಂಬ ಗೌರವಕ್ಕೆ ಆಂಧ್ರಪ್ರದೇಶ ಪಾತ್ರವಾಗಿದೆ.

ಆಂಧ್ರ ಪ್ರದೇಶ ವಿಧಾನಸಭೆ ಮಂಗಳವಾರ ‘ಕೈಗಾರಿಕೆಗಳು / ಕಾರ್ಖಾನೆಗಳಲ್ಲಿ ಆಂಧ್ರಪ್ರದೇಶ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಕಾಯ್ದೆ, 2019’ ಕ್ಕೆ ಅನುಮೋದನೆ ನೀಡಿದೆ. ಇದರ ಅನ್ವಯ ಆಂಧ್ರಪ್ರದೇಶದಲ್ಲಿರುವ ಎಲ್ಲಾ ಖಾಸಗಿ ಕಂಪನಿಗಳು, ಖಾಸಗಿ ಯೋಜನೆಗಳು, ಜಂಟಿ ಸಂಸ್ಥೆಗಳು ತಮ್ಮಲ್ಲಿರುವ ಉದ್ಯೋಗದಲ್ಲಿ ಸ್ಥಳೀಯ ಯುವಜತೆಗೆ ಶೇ. 75 ಮೀಸಲಾತಿ ನೀಡಬೇಕು.

ಜಗನ್​ ಮೋಹನ್​ ರೆಡ್ಡಿ ಅವರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಸ್ಥಳೀಯ ಯುವಜನತೆಗೆ ಉದ್ಯೋಗ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆಗ ನೀಡಿದ್ದ ಭರವಸೆಯನ್ನು ಜಗನ್​ ಈಗ ಈಡೇರಿಸಿದ್ದಾರೆ.

ಹೊಸ ಕಾಯ್ದೆಯನ್ವಯ ಆಂಧ್ರದಲ್ಲಿರುವ ಕಂಪನಿಗಳಿಗೆ ನುರಿತ ಸ್ಥಳೀಯ ಕೆಲಸಗಾರರು ಸಿಗದಿದ್ದಲ್ಲಿ, ಯುವಜನತೆಗೆ ತರಬೇತಿ ನೀಡಿ ಉದ್ಯೋಗ ನೀಡಬೇಕಾಗುತ್ತದೆ. ಈ ಮೂಲಕ ಖಾಸಗಿ ಕಂಪನಿಗಳ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡವರು ಹಾಗೂ ತಮ್ಮ ಉದ್ಯೋಗ ಕಳೆದುಕೊಂಡವರಿಗೆ ಅನುಕೂಲವಾಗಲಿದೆ. ಜತೆಗೆ ಸ್ಥಳೀಯ ಯುವಜನತೆಗೆ ಉದ್ಯೋಗ ಖಾತ್ರಿ ದೊರೆಯಲಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದೆ ಜುಲೈ 9 ರಂದು ಮಧ್ಯಪ್ರದೇಶ ಸರ್ಕಾರ ಖಾಸಗಿ ಕಂಪನಿಗಳಿಲ್ಲ ಸ್ಥಳೀಯ ಯುವಜನತೆಗೆ ಶೇ. 70ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. (ಏಜೆನ್ಸೀಸ್​)