ಕ್ಷಿಪಣಿ ಸುರಕ್ಷತೆಗೆ ಹೊಸ ವ್ಯವಸ್ಥೆ : ಡಿ.ಆರ್.ಡಿ.ಒ

0
179

ಬೆಂಕಿ, ಭಯೋತ್ಪಾದಕ ದಾಳಿಯಿಂದ ಸೇನೆಯ ಕ್ಷಿಪಣಿ, ಸ್ಫೋಟಕಗಳು ಮತ್ತು ಬಾಂಬುಗಳ ದಾಸ್ತಾನುಗಳನ್ನು ರಕ್ಷಿಸುವ ಹೊಸ ತಂತ್ರಜ್ಞಾನ ಮತ್ತು ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಬೆಂಗಳೂರು: ಬೆಂಕಿ, ಭಯೋತ್ಪಾದಕ ದಾಳಿಯಿಂದ ಸೇನೆಯ ಕ್ಷಿಪಣಿ, ಸ್ಫೋಟಕಗಳು ಮತ್ತು ಬಾಂಬುಗಳ ದಾಸ್ತಾನುಗಳನ್ನು ರಕ್ಷಿಸುವ ಹೊಸ ತಂತ್ರಜ್ಞಾನ ಮತ್ತು ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಕೋಠಿಗಳು ಮತ್ತು ಜಲಾಂತರ್ಗಾಮಿಗಳಲ್ಲಿ ಬೆಂಕಿ ಆಕಸ್ಮಿಕದಿಂದ ನಷ್ಟಕ್ಕೆ ತುತ್ತಾದ ಕಾರಣ ಹೊಸ ರಕ್ಷಣಾ ವ್ಯವಸ್ಥೆಯು ವಿಶ್ವದಲ್ಲೇ ವಿನೂತನ ವೆನಿಸಿದೆ. ಈ ಕುರಿತು ಡಿಆರ್‌ಡಿಒ ಮಹಾ ನಿರ್ದೇಶಕಿ ಡಾ.ಚಿತ್ರಾ ರಾಜಗೋಪಾಲ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದೇಶದ ವಿವಿಧ ಭಾಗಗಳಲ್ಲಿ ಸ್ಫೋಟಕಗಳ ದಾಸ್ತಾನು ಇದೆ. ಆದರೆ, ಇಲ್ಲಿಯವರೆಗೆ ಇವುಗಳ ರಕ್ಷಣೆಗೆ ವಿಶೇಷ ವ್ಯವಸ್ಥೆ ಇರಲಿಲ್ಲ. ಕೆಲವು ಕಡೆಗಳಲ್ಲಿ ತೆರೆದ ಪ್ರದೇಶಗಳಲ್ಲಿ ಇಡಲಾಗಿತ್ತು. ಹೀಗಾಗಿ ಅಗ್ನಿ ಆಕಸ್ಮಿಕ ಅಥವಾ ಕಿಡಿಗೇಡಿಗಳ ಕೃತ್ಯಗಳಿಂದ ಸಾಕಷ್ಟು ಸಲ ಬೆಂಕಿ ಆಕಸ್ಮಿಕಗಳಲ್ಲಿ ಸ್ಫೋಟಕಗಳು, ಶಸ್ತ್ರಾಸ್ತ್ರಗಳ ದಾಸ್ತಾನು ಸುಟ್ಟು ಹೋಗಿತ್ತು. ಈಗ ಅಭಿವೃದ್ಧಿಪಡಿರುವ ವ್ಯವಸ್ಥೆ ವಿಶ್ವದಲ್ಲೇ ಅದ್ವಿತೀಯವಾದುದು ಎಂದು ಅವರು ತಿಳಿಸಿದರು.

ಭೂಮಿಯೊಳಗೆ ಸ್ಫೋಟಕಗಳ ದಾಸ್ತಾನು: ಹೊಸ ಮದ್ದುಗುಂಡು ನೀತಿಯ ಅನ್ವಯ ಸ್ಫೋಟಕಗಳನ್ನು ಭೂಮಿಯೊಳಗೆ ಸಂಗ್ರಹಿಸಿಡಲಾಗುವುದು. ಇಗ್ಲೂಗಳ ನಿರ್ಮಾಣವೂ ಭೂಮಿಯೊಳಗೇ ಆಗುತ್ತದೆ.  ಅಗ್ನಿ ಆಕಸ್ಮಿಕ ಸಂಭವಿಸಿದರೂ ಅದರ ಅಕ್ಕ– ಪಕ್ಕದ ಪ್ರದೇಶಗಳು ಮತ್ತು ಜನವಸತಿ ಪ್ರದೇಶಕ್ಕೆ ಯಾವುದೇ ಹಾನಿ ಸಂಭವಿಸದ ವಿಶಿಷ್ಟ ವ್ಯವಸ್ಥೆ ಇದಾಗಿದೆ ಎಂದು ಅವರು ಹೇಳಿದರು.

ಯುದ್ಧ ನೌಕೆಗಳು, ಜಲಾಂತರ್ಗಾಮಿಗಳು ಮತ್ತು ಯುದ್ಧ ವಿಮಾನಗಳಿಗೆ ಬೆಂಕಿ ತಗುಲಿದರೆ, ಕ್ಷಣ ಮಾತ್ರದಲ್ಲಿ ಮುನ್ಸೂಚನೆ ನೀಡುವ ಸೆನ್ಸರ್‌ಗಳಿರುತ್ತವೆ. ಹಬೆ ಮತ್ತು ನೀರಿನ ಹನಿಗಳ ಸೃಷ್ಟಿಯಾಗುತ್ತಿದ್ದಂತೆ ಸೆನ್ಸರ್‌ಗಳು ಗ್ರಹಿಸಿ ಸೂಚನೆ ನೀಡುತ್ತವೆ ಎಂದು ಅವರು ವಿವರಿಸಿದರು.

‘ನಮ್ಮ ಸಂಶೋಧನೆಯಲ್ಲಿ ಬೆಂಕಿಯಿಂದ ಸುರಕ್ಷತೆ, ಎಲ್ಲ ರೀತಿಯ ಸ್ಫೋಟಕಗಳು ಮತ್ತು ಮದ್ದುಗುಂಡುಗಳಿಗೆ ರಕ್ಷಣೆ ಮತ್ತು ಪರಿಸರ ರಕ್ಷಣೆಗೂ ಆದ್ಯತೆ ನೀಡಲಾಗಿದೆ. ಯಾವುದೇ ದೇಶ ಸ್ಫೋಟಕಗಳ ರಕ್ಷಣೆಯ ವಿನ್ಯಾಸ 
ವ್ಯವಸ್ಥೆಯನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ಉದ್ದೇಶದಿಂದ ನಮ್ಮದೇ ಆದ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ರೂಪಿಸಿದ್ದೇವೆ’ ಎಂದು ಅವರು ತಿಳಿಸಿದರು.

ಇಗ್ಲೂ ಮಾದರಿಯ ವಿನ್ಯಾಸ

ಸ್ಫೋಟಕಗಳ ದಾಸ್ತಾನು ರಕ್ಷಿಸಲು ‘ಇಗ್ಲೂ’ ಮಾದರಿಯ ವಿನ್ಯಾಸ ಅಭಿವೃದ್ಧಿಪಡಿಸಲಾಗಿದೆ. ‘ಇಗ್ಲೂ’ ಎಂದರೆ, ಎಸ್ಕಿಮೋ ಜನರು ವಾಸ ಮಾಡುವ ಮಂಜಿನಿಂದ ತಯಾರಿಸಿದ ಗುಡಿಸಲು. ಇದೇ ಮಾದರಿಯಲ್ಲಿ ಕಾಂಕ್ರಿಟ್‌ನಿಂದ ಇಗ್ಲೂಗಳನ್ನು ನಿರ್ಮಿಸಲಾಗುತ್ತದೆ. ಇವುಗಳಿಗೆ ಸೆನ್ಸರ್‌ಗಳನ್ನು ಅಳವಡಿಸ
ಲಾಗಿದೆ.

ಸ್ಫೋಟಕಗಳ ಕೋಠಿಯಲ್ಲಿ ಅನಿಲ ತುಂಬಿಕೊಂಡರೆ ಅದು ಹೊರ ಹೋಗಲು ಇಗ್ಲೂಗಳು ಕುಕ್ಕರ್‌ ಮಾದರಿಯಲ್ಲಿ ಕಾಂಕ್ರಿಟ್‌ ಮುಚ್ಚುಳಗಳು ಸ್ವಯಂ ತೆರೆದುಕೊಂಡು ಅನಿಲವನ್ನು ಹೊರ ಹಾಕುವ ವ್ಯವಸ್ಥೆಯನ್ನು ಹೊಂದಿರುತ್ತದೆ. ಬೆಂಕಿ ಕಿಡಿ ತಾಗಿದರೆ ತಕ್ಷಣವೇ ಎಚ್ಚರಿಕೆ ನೀಡಿ ಬೆಂಕಿ ಹರಡದಂತೆ ನೋಡಿಕೊಳ್ಳುತ್ತದೆ. ಎಲ್ಲ ಮದ್ದುಗುಂಡುಗಳು ಮತ್ತು 
ಸ್ಫೋಟಕಗಳನ್ನೂ ಸುರಕ್ಷಿತವಾಗಿ ಪ್ರತ್ಯೇಕಿಸುತ್ತವೆ ಎಂದು ಚಿತ್ರಾ ರಾಜಗೋಪಾಲ್‌ ತಿಳಿಸಿದರು.