ಕ್ಷಿಪಣಿ ಖರೀದಿ: ಕತಾರ್​ಗೆ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ

0
19

ರಷ್ಯಾದಿಂದ ಎಸ್​-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದರೆ ನಿಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಕತಾರ್​ಗೆ ಸೌದಿ ಅರೇಬಿಯಾದ ರಾಜ ಮೊಹಮ್ಮದ್​ ಬಿನ್​ ಸಲ್ಮಾನ್​ ಎಚ್ಚರಿಕೆ ನೀಡಿದ್ದಾರೆ.

ಪ್ಯಾರಿಸ್​: ರಷ್ಯಾದಿಂದ ಎಸ್​-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದರೆ ನಿಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಕತಾರ್​ಗೆ ಸೌದಿ ಅರೇಬಿಯಾದ ರಾಜ ಮೊಹಮ್ಮದ್​ ಬಿನ್​ ಸಲ್ಮಾನ್​ ಎಚ್ಚರಿಕೆ ನೀಡಿದ್ದಾರೆ ಎಂದು ಫ್ರಾನ್ಸ್​ನ ಪತ್ರಿಕೆಯೊಂದು ವರದಿ ಮಾಡಿದೆ.

ಕತಾರ್​ ಮತ್ತು ರಷ್ಯಾ ರಾಷ್ಟ್ರಗಳು ಕಳೆದ ವರ್ಷ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರನ್ವಯ ಕತಾರ್​ ರಷ್ಯಾದ ಅತ್ಯಾಧುನಿಕ ಎಸ್​-400 ಕ್ಷಿಪಣಿ ವ್ಯವಸ್ಥೆ ಖರೀದಿಸಲು ಮಾತುಕತೆ ಪ್ರಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ರಾಜ ಸಲ್ಮಾನ್​ ಫ್ರಾನ್ಸ್​ನ ಅಧ್ಯಕ್ಷ ಎಮ್ಯಾನ್ಯುಯಲ್​ ಮಾಕ್ರನ್​ಗೆ ಪತ್ರ ಬರೆದಿದ್ದಾರೆ. ರಷ್ಯಾದಿಂದ ಕತಾರ್​ ಕ್ಷಿಪಣಿಯನ್ನು ಖರೀದಿಸಿಸಲು ಮುಂದಾಗಿದೆ. ಒಂದು ವೇಳೆ ಕತಾರ್​ ಅದರಲ್ಲಿ ಯಶಸ್ವಿಯಾದರೆ ಅದರ ರಕ್ಷಣಾ ವ್ಯವಸ್ಥೆಯನ್ನು ನಾಶ ಪಡಿಸಲು ಸೇನಾ ಕಾರ್ಯಾಚರಣೆ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಸಲ್ಮಾನ್​ ತಿಳಿಸಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಕತಾರ್​ ಕ್ಷಿಪಣಿಯನ್ನು ಖರೀದಿಸದಂತೆ ತಡೆಯಲು ಮತ್ತು ಮಧ್ಯ ಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸೌದಿ ಅರೇಬಿಯಾಗೆ ನೆರವು ನೀಡುವಂತೆ ಫ್ರಾನ್ಸ್​ ಅಧ್ಯಕ್ಷರಿಗೆ ಸಲ್ಮಾನ್​ ಮನವಿ ಮಾಡಿದ್ದಾರೆ. ಆದರೆ ಈ ವರದಿಯನ್ನು ಸೌದಿ ಅರೇಬಿಯಾ ಮತ್ತು ಫ್ರಾನ್ಸ್​ ಸರ್ಕಾರ ಖಚಿತಪಡಿಸಿಲ್ಲ.

ಕಳೆದ ವರ್ಷ ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಸೌದಿ ಅರೇಬಿಯಾ, ಈಜಿಪ್ಟ್​, ಬಹರೇನ್​, ಯುಎಇ ರಾಷ್ಟ್ರಗಳು ಕತಾರ್​ನೊಂದಿಗೆ ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಸಂಬಂಧವನ್ನು ಕಡಿದುಕೊಂಡಿದ್ದವು.