‘ಕ್ರಿಮಿನಲ್‌’ ರಾಜಕಾರಣಿಗೆ ಸಂಸತ್ತೇ ಹಾಕಲಿ ಅಂಕುಶ : ಸುಪ್ರೀಂಕೋರ್ಟ್

0
289

ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಸುಪ್ರೀಂ ಕೋರ್ಟ್
ಸೆಪ್ಟೆಂಬರ್ 25 ರ ಮಂಗಳವಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ವಿಷಯವನ್ನು ಸಂಸತ್‌ ವಿವೇಚನೆಗೆ ಬಿಟ್ಟಿದೆ.

ನವದೆಹಲಿ: ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 25 ರ ಮಂಗಳವಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ವಿಷಯವನ್ನು ಸಂಸತ್‌ ವಿವೇಚನೆಗೆ ಬಿಟ್ಟಿದೆ.

ಕಳಂಕಿತ ರಾಜಕಾರಣಿಗಳು ಚುನಾವಣಾ ರಾಜಕೀಯ ಪ್ರವೇಶಿಸದಂತೆ ತಡೆಯಲು ಸಂಸತ್‌ ಸೂಕ್ತ ಕಾನೂನು ರಚಿಸಲಿ. ಅದಕ್ಕೆ ಇದು ಸಕಾಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ ಅಭಿಪ್ರಾಯಪಟ್ಟಿದೆ.

ಅಪರಾಧ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳ ಸದಸ್ಯತ್ವ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಸಲಹೆ ನೀಡಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಈ ಅರ್ಜಿಗಳ ವಿಚಾರಣೆ ನಡೆಸಿದ ಸಂವಿಧಾನ ಪೀಠ, ‘ಉತ್ತಮ ಚಾರಿತ್ರ್ಯದ ಜನಪ್ರತಿನಿಧಿಗಳನ್ನು ಬಯಸುವುದು ಜನರ ಹಕ್ಕು. ಹೀಗಾಗಿ ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳನ್ನು ರಾಜಕೀಯದಿಂದ ದೂರ ಇಡಬೇಕು’ ಎಂದು ಸಲಹೆ ಮಾಡಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಬೆಳವಣಿಗೆ ಮಾರಕವಾಗಿ ಪರಿಣಮಿಸುವ ಮೊದಲು ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ಕಿವಿಮಾತು ಹೇಳಿದೆ.

ಸದ್ಯ ದೇಶದಲ್ಲಿ ಮೂರನೇ ಒಂದು ಭಾಗಕ್ಕಿಂತ ಸ್ವಲ್ಪ ಜಾಸ್ತಿ ಅಂದರೆ,
1,700 ಸಂಸದರು ಮತ್ತು ಶಾಸಕರು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ.

ಸದ್ಯ ಜಾರಿಯಲ್ಲಿರುವ ಕಾನೂನಿನಲ್ಲಿ, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ರಾಜಕಾರಣಿಗಳು ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ, ಅವರು ರಾಜಕೀಯ ಪಕ್ಷ ಸ್ಥಾಪಿಸದಂತೆ ಮತ್ತು ಪಕ್ಷದಲ್ಲಿ ಹುದ್ದೆ ವಹಿಸಿಕೊಳ್ಳದಂತೆ ತಡೆಯಲು ಸಾಧ್ಯವಿಲ್ಲ. ಈ ವ್ಯವಸ್ಥೆ ಬದಲಾಗಬೇಕು ಮತ್ತು ರಾಜಕೀಯ ವ್ಯವಸ್ಥೆಯನ್ನು ಅಪರಾಧ ಚಟುವಟಿಕೆಗಳಿಂದ ಮುಕ್ತಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ಸುಪ್ರೀಂ ಕೋರ್ಟ್ ಸಲಹೆಗಳು

–  ರಾಜಕಾರಣದ ಅಪರಾಧೀಕರಣ ರೋಗವನ್ನು ಗುಣಪಡಿಸುವ ಮದ್ದು ಇಲ್ಲ. ಸಂಸತ್‌ ರೂಪಿಸುವ ಹೊಸ ಕಾನೂನಿಗಾಗಿ ದೇಶ ಎದುರು ನೋಡುತ್ತಿದೆ

– ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಪ್ರಮಾಣಪತ್ರದಲ್ಲಿ ಎಲ್ಲ ವಿವರಗಳನ್ನು ಬಹಿರಂಗಪಡಿಸಬೇಕು. ಚುನಾವಣಾ ಆಯೋಗ ಇದರ ಮೇಲೆ ನಿಗಾ ಇಡಬೇಕು

– ಪ್ರಮಾಣಪತ್ರದಲ್ಲಿ ಕ್ರಿಮಿನಲ್‌ ಪ್ರಕರಣಗಳ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಎದ್ದು ಕಾಣುವಂತೆ ನಮೂದಿಸಬೇಕು

– ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಅಪರಾಧ ಪ್ರಕರಣಗಳ ಮಾಹಿತಿಯನ್ನು ತಾವು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ಸಲ್ಲಿಸಬೇಕು

– ರಾಜಕೀಯ ಪಕ್ಷಗಳು ಆ ಮಾಹಿತಿ ಮತ್ತು ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಪಟ್ಟಿಯನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.