ಕ್ಯಾನ್ಸರ್‌ಗೆ ಚಿಕಿತ್ಸೆ: ಅಮೆರಿಕ, ಜಪಾನ್‌ ಜೋಡಿಗೆ 2018 ರ “ವೈದ್ಯಕೀಯ ನೊಬೆಲ್‌ ಪ್ರಶಸ್ತಿ”

0
1179

ಕ್ಯಾನ್ಸರ್‌ಗೆ ಕ್ರಾಂತಿಕಾರಿ ಚಿಕಿತ್ಸೆಯನ್ನು ಪತ್ತೆ ಹಚ್ಚಿದ ಅಮೆರಿಕದ ಜೇಮ್ಸ್‌ ಅಲಿಸನ್‌ ಮತ್ತು ಜಪಾನ್‌ನ ಟಸುಕು ಹೋಂಜೋ ಜೋಡಿಗೆ ಸೋಮವಾರ 2018ರ ವೈದ್ಯಕೀಯ ವಿಭಾಗದ ನೊಬೆಲ್‌ ಪ್ರಶಸ್ತಿ ಪ್ರಕಟಿಸಲಾಗಿದೆ.

ಸ್ಟಾಕ್‌ಹೋಮ್‌: ಕ್ಯಾನ್ಸರ್‌ಗೆ ಕ್ರಾಂತಿಕಾರಿ ಚಿಕಿತ್ಸೆಯನ್ನು ಪತ್ತೆ ಹಚ್ಚಿದ ಅಮೆರಿಕದ ಜೇಮ್ಸ್‌ ಅಲಿಸನ್‌ ಮತ್ತು ಜಪಾನ್‌ನ ಟಸುಕು ಹೋಂಜೋ ಜೋಡಿಗೆ ಸೋಮವಾರ 2018ರ ವೈದ್ಯಕೀಯ ವಿಭಾಗದ ನೊಬೆಲ್‌ ಪ್ರಶಸ್ತಿ ಪ್ರಕಟಿಸಲಾಗಿದೆ. ಇಬ್ಬರೂ ರೋಗ ಪ್ರತಿಬಂಧಕ ಶಾಸ್ತ್ರ ವೈದ್ಯರು. ಅಲಿಸನ್‌ ಅವರು ಟೆಕ್ಸಾಸ್‌ ವಿವಿ ಪ್ರೊಫೆಸರ್‌ ಆಗಿದ್ದರೆ, ಹೋಂಜೋ ಕ್ಯೋಟೊ ವಿವಿಯ ಪ್ರೊಫೆಸರ್‌. ಇದೇ ಜೋಡಿ ಏಷ್ಯಾದ ನೊಬೆಲ್‌ ಎಂದೇ ಖ್ಯಾತಿವೆತ್ತ ಟ್ಯಾಂಗ್‌ ಪ್ರಶಸ್ತಿಯನ್ನು 2014ರಲ್ಲಿ ಪಡೆದಿತ್ತು. 

ಕ್ಯಾನ್ಸರ್‌ ಹೆಚ್ಚಿಸುವ ಪ್ರೊಟೀನ್‌ಗೆ ಬ್ರೇಕ್‌ 
ಕ್ಯಾನ್ಸರ್‌ ಕೋಶಗಳನ್ನು ದೇಹದ ರಕ್ಷಣಾ ವ್ಯವಸ್ಥೆ ಕೊಲ್ಲುವ ಸಾಮರ್ಥ್ಯ‌ವನ್ನು ಹೊಂದಿದೆ. ಆದರೆ, ದೇಹದ ರೋಗ ನಿರೋಧಕ ವ್ಯವಸ್ಥೆಯ ಕೋಶಗಳು ಮತ್ತು ಕೆಲವು ಕ್ಯಾನ್ಸರ್‌ ಕೋಶಗಳಿಂದ ಸೃಷ್ಟಿಯಾಗುವ ಪ್ರೊಟೀನ್‌ಗಳು ಇದನ್ನು ತಡೆಯುತ್ತವೆ. ಇಂಥ ಪುಂಡ ಪ್ರೊಟೀನ್‌ಗಳನ್ನು ಮುರಿಯುವ ಚಿಕಿತ್ಸೆಯನ್ನು ಅಲಿಸನ್‌ ಮತ್ತು ಟಸುಕು ವೈದ್ಯ ಜೋಡಿ ಕಂಡುಹಿಡಿದಿದೆ. 

ಅಲ್ಫ್ರೆಡ್‌ ನೊಬೆಲ್‌ ಅವರ 122ನೇ ಪುಣ್ಯತಿಥಿಯಾದ ಡಿಸೆಂಬರ್‌ 10ರಂದು ಸ್ಟಾಕ್‌ಹೋಮ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 1949ರಲ್ಲಿ ಪ್ರಶಸ್ತಿ ಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ 2018ರ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಘೋಷಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. 

ನೊಬೆಲ್‌ ಘೋಷಣೆ ವೇಳಾಪಟ್ಟಿ 
ಅಕ್ಟೋಬರ್ 2: ಭೌತಶಾಸ್ತ್ರ ನೊಬೆಲ್‌ 
ಅಕ್ಟೋಬರ್ 3: ರಸಾಯನ ಶಾಸ್ತ್ರ 
ಅಕ್ಟೋಬರ್ 5: ಶಾಂತಿ ಪ್ರಶಸ್ತಿ 
ಅಕ್ಟೋಬರ್ 8: ಅರ್ಥ ಶಾಸ್ತ್ರ 
ಡಿಸೆಂಬರ್‌ 10: ಪ್ರಶಸ್ತಿ ವಿತರಣೆ.