ಕೋಹ್ಲಿ 5ನೇ ಸ್ಥಾನಕ್ಕೆ ನೆಗೆತ, ಜಡೇಜಾ ಕುಸಿತ

0
15

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೊಸತಾಗಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೋಹ್ಲಿ ಐದನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ಕೋಲ್ಕತ್ತಾದ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಬಲಿಯಾಗಿದ್ದ ಕೋಹ್ಲಿ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಸಾಧನೆ ಮಾಡಿದ್ದರು.

119 ಎಸೆತಗಳನ್ನು ಎದುರಿಸಿದ್ದ ನಾಯಕ ವಿರಾಟ್, 104 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳ ಸಾಧನೆ ಮಾಡಿದ್ದರು.

ಕೋಹ್ಲಿ ಇದೀಗ ನಾಲ್ಕನೇ ಸ್ಥಾನದಲ್ಲಿರುವ ಭಾರತದ್ದೇ ಆಗಿರುವ ಚೇತೇಶ್ವರ ಪೂಜಾರ ನಂತರ ಗುರುತಿಸಿಕೊಂಡಿದ್ದಾರೆ. ಇವರಿಬ್ಬರು ಅನುಕ್ರಮವಾಗಿ 866 ಹಾಗೂ 817 ರೇಟಿಂಗ್ ಪಾಯಿಂಟ್‌ಗಳನ್ನು ಹಂಚಿಕೊಂಡಿದ್ದಾರೆ.

ಲೋಕೆಶ್ ರಾಹುಲ್ ಅಗ್ರ 10ರ ಪಟ್ಟಿಯಲ್ಲಿರುವ ಮಗದೋರ್ವ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೋಲ್ಕತ್ತಾ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದ ರಾಹುಲ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಇದೀಗ 757 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

ಅಂದ ಹಾಗೆ ಬ್ಯಾಟಿಂಗ್ ವಿಭಾಗವನ್ನು ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಮುನ್ನಡೆಸುತ್ತಿದ್ದು, ಇಂಗ್ಲೆಂಡ್‌ನ ಜೋ ರೂಟ್ ಹಾಗೂ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಹಿಂಬಾಲಿಸುತ್ತಿದ್ದಾರೆ.

ಅತ್ತ ಬೌಲಿಂಗ್ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಕೋಲ್ಕತ್ತಾ ಪಂದ್ಯದಲ್ಲಿ ಎರಡು ಓವರ್‌ಗಳನ್ನಷ್ಟೇ ಎಸೆದಿರುವ ಜಡೇಜಾ 20 ರ‍್ಯಾಂಕಿಂಗ್ ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದಾರೆ.

ಜಡೇಜಾ ನಂತರದ ನಾಲ್ಕನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ 840 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಈ ವಿಭಾಗವನ್ನು ಇಂಗ್ಲೆಂಡ್‌ನ ಜೇಮ್ಸ್ ಆಂಡ್ರೆಸನ್ ಮುನ್ನಡೆಸುತ್ತಿದ್ದು, ದಕ್ಷಿಣ ಆಫ್ರಿಕಾದ ಕಗಿಸೊ ರಬಡ ನಂತರದ ಸ್ಥಾನದಲ್ಲಿದ್ದಾರೆ.