ಕೋಚ್‌ ಇರ್ಫಾನ್‌ ಅನ್ಸಾರಿ ಮೇಲೆ 10 ವರ್ಷ ನಿಷೇಧ : ಐ.ಸಿ.ಸಿ

0
411

‍ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸರ್ಫರಾಜ್‌ ಅಹ್ಮದ್‌ ಅವರನ್ನು ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮೂಲದ ಕೋಚ್‌ ಇರ್ಫಾನ್‌ ಅನ್ಸಾರಿ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) 10 ವರ್ಷ ನಿಷೇಧ ಹೇರಿದೆ.

ದುಬೈ (ಪಿಟಿಐ): ‍ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸರ್ಫರಾಜ್‌ ಅಹ್ಮದ್‌ ಅವರನ್ನು ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮೂಲದ ಕೋಚ್‌ ಇರ್ಫಾನ್‌ ಅನ್ಸಾರಿ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) 10 ವರ್ಷ ನಿಷೇಧ ಹೇರಿದೆ.

2017ರ ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ನಡೆದಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಣ ಸರಣಿಯ ವೇಳೆ ಸರ್ಫರಾಜ್‌ ಅವರನ್ನು ಭೇಟಿಯಾಗಿದ್ದ ಶಾರ್ಜಾ ತಂಡದ ಕೋಚ್‌ ಅನ್ಸಾರಿ, ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದರು. ಈ ಸಂಬಂಧ ಸರ್ಫರಾಜ್‌ ಕೂಡಲೇ ಐಸಿಸಿಗೆ ದೂರು ನೀಡಿದ್ದರು.

‘ಐಸಿಸಿ ಭ್ರಷ್ಟಾಚಾರ ನಿಗ್ರಹ ಮಂಡಳಿಯ ಎದುರು ಬುಧವಾರ ವಿಚಾರಣೆಗೆ ಹಾಜರಾಗಿದ್ದ ಅನ್ಸಾರಿ, ತಪ್ಪೊಪ್ಪಿಕೊಂಡಿದ್ದಾರೆ. ಅವರು ಮೂರು ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ನಿಷೇಧ ಹೇರಲಾಗಿದೆ’ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್‌ ಮಾರ್ಷಲ್‌ ತಿಳಿಸಿದ್ದಾರೆ.

‘ಸರ್ಫರಾಜ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. ಜೊತೆಗೆ ವಿಚಾರಣೆಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಅವರಿಗೆ ನಾವು ಆಭಾರಿಯಾಗಿದ್ದೇವೆ’ ಎಂದು ಅಲೆಕ್ಸ್‌ ಹೇಳಿದ್ದಾರೆ.