ಕೊರಿಯಾ ಓಪನ್ ಸೂಪರ್ ಸಿರೀಸ್: ಸಿಂಧು ಮುಡಿಗೆ

0
25

ಭಾರತದ ಪಿ.ವಿ.ಸಿಂಧು ಕೊರಿಯಾ ಓಪನ್‌ ಸೂಪರ್ ಸೀರಿಸ್‌ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದರು. ಇದು ರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಶಿಪ್ ಬೆಳ್ಳಿ ಪದಕಧಾರಿ ಸಿಂಧು ಅವರ ಮೂರನೇ ಸೂಪರ್ ಸಿರೀಸ್ ಪ್ರಶಸ್ತಿಯಾಗಿದೆ.

ಮೂರು ವಾರಗಳ ಹಿಂದೆ ಚೊಚ್ಚಲ ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ವಿುಸಿದ್ದ ಪಿವಿ ಸಿಂಧು ಮತ್ತೊಂದು ಅಮೋಘ ಸಾಧನೆ ಮಾಡಿದ್ದಾರೆ. ಭಾನುವಾರ ಮುಕ್ತಾಯಗೊಂಡ ಕೊರಿಯಾ ಓಪನ್ ಸೂಪರ್ ಸಿರೀಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಷಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಜ‍ಪಾನ್‌ನ ನೊಜೊಮಿ ಒಕುಹರಾ ಅವರನ್ನು ಮಣಿಸಿದ ಅವರು ಈ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಇದು ಅವರ ವೃತ್ತಿಜೀವನದ ಮೂರನೇ ಸೂಪರ್ ಸೀರಿಸ್ ಪ್ರಶಸ್ತಿ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಂದು ತಾಸು 50 ನಿಮಿಷಗಳ ವರೆಗೆ ಕಾದಾಡಿದ ಈ ಆಟಗಾರ್ತಿಯರ ಭಾನುವಾರದ ಪಂದ್ಯ ಒಂದು ತಾಸು 23 ನಿಮಿಷದಲ್ಲಿ ಕೊನೆಗೊಂಡಿತು. ಎಸ್‌.ಕೆ.ಹ್ಯಾಂಡ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಪ್ರೇಕ್ಷಕರಿಗೆ ರೋಚಕ ಅನುಭವ ನೀಡಿತು. ಆಸ್ಟ್ರೇಲಿಯಾ ಓಪನ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಕನಸಿನೊಂದಿಗೆ ಇಲ್ಲಿಗೆ ಬಂದಿದ್ದ ಒಕುಹರಾ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು.

ಮೊದಲ ಗೇಮ್‌ನ ಆರಂಭದಲ್ಲಿ ಯಾವುದೇ ಪಾಯಿಂಟ್ ಬಿಟ್ಟುಕೊಡದೆ 2 ಪಾಯಿಂಟ್‌ಗಳ ಮುನ್ನಡೆ ಗಳಿಸಿದ ಸಿಂಧುಗೆ ಒಕುಹರಾ ಪ್ರಬಲ ಸ್ಪರ್ಧೆ ಒಡ್ಡಿದರು. ಹೀಗಾಗಿ ಒಂದು ಹಂತದಲ್ಲಿ ಹಿನ್ನಡೆಯನ್ನು 3–5ಕ್ಕೆ ಇಳಿಸಿದರು.

ಪ್ರಧಾನಿ ಮೋದಿ ಜನ್ಮದಿನಕ್ಕೆ ಗೆಲುವು ಅರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಸಿಂಧು ಕೊರಿಯಾ ಓಪನ್ ಪ್ರಶಸ್ತಿ ಗೆಲುವನ್ನು ಅರ್ಪಿಸಿದ್ದಾರೆ. ‘ದೇಶಕ್ಕೆ ಅವಿಶ್ರಾಂತ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಮ್ಮ ಪ್ರಧಾನಿಯ ಜನ್ಮದಿನಕ್ಕೆ ಈ ಗೆಲುವು ಅರ್ಪಣೆ’ ಎಂದು ಸಿಂಧು ಟ್ವೀಟಿಸಿದ್ದಾರೆ. ಇದಕ್ಕೆ ಮುನ್ನ ಸಿಂಧು ಗೆಲುವಿಗೆ ಪ್ರಧಾನಿ ಮೋದಿ, ‘ನಿಮ್ಮ ಸಾಧನೆಗೆ ದೇಶ ಹೆಮ್ಮೆ ಪಡುತ್ತದೆ’ ಅಭಿನಂದನೆ ಸಲ್ಲಿಸಿದ್ದರು. ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಸಹಿತ ಹಲವು ಗಣ್ಯರು ಟ್ವಿಟರ್​ನಲ್ಲಿ ಸಿಂಧು ಅವರನ್ನು ಅಭಿನಂದಿಸಿದ್ದಾರೆ.