ಕೇವಲ 27.5ಲಕ್ಷ ಉದ್ಯೋಗ ಸೃಷ್ಟಿ! : ಕೇಂದ್ರ ಸರ್ಕಾರದ ಅಂಕಿ ಅಂಶ ಬಹಿರಂಗ

0
547

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಾಲ್ಕೂವರೆವರ್ಷದಲ್ಲಿ ಪ್ರಮುಖ ಯೋಜನೆಗಳ ಮೂಲಕ ಕೇವಲ 27.5 ಲಕ್ಷ ಉದ್ಯೋಗ ಸೃಷ್ಟಿಸಿದೆ ಎಂದು ಕೇಂದ್ರ ಸರ್ಕಾರದ ದಾಖಲೆಗಳು ಉಲ್ಲೇಖಿಸಿವೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಾಲ್ಕೂವರೆ ವರ್ಷದಲ್ಲಿ ಪ್ರಮುಖ ಯೋಜನೆಗಳ ಮೂಲಕ ಕೇವಲ 27.5 ಲಕ್ಷ ಉದ್ಯೋಗ ಸೃಷ್ಟಿಸಿದೆ ಎಂದು ಕೇಂದ್ರ ಸರ್ಕಾರದ ದಾಖಲೆಗಳು ಉಲ್ಲೇಖಿಸಿವೆ. 

2022ರೊಳಗೆ ‘ಮೇಕ್ ಇನ್ ಇಂಡಿಯಾ’ ಯೋಜನೆಯೊಂದರಲ್ಲಿಯೇ 10 ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಕೇಂದ್ರ ನೀಡಿತ್ತು.

ಅಸಂಘಟಿತ ವಲಯ ಹಾಗೂ ಸ್ವಯಂ ಉದ್ಯೋಗ ಸೇರಿದಂತೆ ಕೋಟ್ಯಂತರ ಉದ್ಯೋಗಗಳನ್ನು ತಮ್ಮ ಸರ್ಕಾರದ ಅವಧಿಯಲ್ಲಿ  ಸೃಷ್ಟಿಸಲಾಗಿದೆ ಎಂದು ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ತಮ್ಮ ಕೊನೆಯ ಭಾಷಣ ಮಾಡುವಾಗ ಪ್ರಸ್ತಾಪಿಸಿದ್ದರು.

ಆದರೆ, ಅದೇ ಸಮಯದಲ್ಲಿ ಉದ್ಯೋಗ ಕುರಿತಂತೆ ಕೇಂದ್ರ ಸರ್ಕಾರದ ದಾಖಲೆಗಳಲ್ಲಿ ಈ ಅಂಕಿ–ಸಂಖ್ಯೆಗಳು ಬಹಿರಂಗವಾಗಿವೆ. 

ಉದ್ಯೋಗಗಳಿಗೆ ಯುವಕರನ್ನು ಸಜ್ಜುಗೊಳಿಸುವ ಕೌಶಲಾಭಿವೃದ್ಧಿ ಯೋಜನೆಗಳ ಹೊರತಾಗಿ, ಮೂರು ಮಹತ್ವದ ಉದ್ಯೋಗ ಸೃಷ್ಟಿ ಯೋಜನೆಗಳ ಮೂಲಕ ಗ್ರಾಮೀಣ ಹಾಗೂ ನಗರ ಭಾಗದ ಯುವಜನತೆಗೆ ಉದ್ಯೋಗದ ಅವಕಾಶಗಳನ್ನು ಕೇಂದ್ರ ಸರ್ಕಾರದ ಒದಗಿಸಿದೆ.

ಸಣ್ಣ ಉದ್ದಿಮೆ ಹಾಗೂ ಕೃಷಿಯೇತರ ವಲಯದಲ್ಲಿ ಉದ್ಯೋಗ ರಚನೆ ಉದ್ದೇಶ ಹೊಂದಿರುವ ‘ಪ್ರಧಾನಮಂತ್ರಿ ಉದ್ಯೋಗ ಕಾರ್ಯಕ್ರಮ’ದಡಿ (ಪಿಎಂಇಜಿಪಿ) 2014–18ರ ಅವಧಿ ಯಲ್ಲಿ 11.88 ಲಕ್ಷ ಉದ್ಯೋಗ ಸಿಕ್ಕಿವೆ. 

‘ದೀನ್‌ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ’ಯು (ಡಿಡಿಯುಜಿಕೆವೈ) ದೇಶದಾದ್ಯಂತ 5 ಲಕ್ಷ ಉದ್ಯೋಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸರ್ಕಾರದ ಅವಧಿ ಮುಗಿ ಯುವುದರ ಒಳಗೆ ಗ್ರಾಮೀಣ ಭಾಗದ ಸುಮಾರು 5.5 ಕೋಟಿ ಜನರಿಗೆ ಉದ್ಯೋಗ ಒದಗಿಸುವುದು ಇದರ ಉದ್ದೇಶ.

ನಗರ ಪ್ರದೇಶದ ಬಡತನ ನಿವಾ ರಣೆಗೆ ಮೋದಿ ಸರ್ಕಾರ ಜಾರಿಗೊಳಿಸಿದ್ದ ದೀನ್‌ದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ ಕೇವಲ 4.72 ಲಕ್ಷ ಜನರಿಗಷ್ಟೇ ನೌಕರಿ ನೀಡಲು ಸಾಧ್ಯವಾಗಲಿದೆ. 

ಎನ್‌ಡಿಎ ಸರ್ಕಾರದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ 1,080.6 ಕೋಟಿ ಕೆಲಸದ ದಿನಗಳು ಸೃಷ್ಟಿಯಾಗಿವೆ. ರಾಜ್ಯಸಭೆಯಲ್ಲಿ ಮಂಡನೆಯಾದ ದಾಖಲೆಯು ಈ ಮಾಹಿತಿಯನ್ನು ನೀಡಿದೆ. ಗ್ರಾಮೀಣ ಭಾಗದ ವ್ಯಕ್ತಿಯೊಬ್ಬರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗ ನೀಡಬೇಕೆಂಬುದನ್ನು ಈ ಕಾಯ್ದೆ ಹೇಳುತ್ತದೆ. 

ಪಿಎಂಇಜಿಪಿ–ಎಲ್ಲೆಲ್ಲಿ ಹೆಚ್ಚು ಉದ್ಯೋಗ?

ಉತ್ತರ ಪ್ರದೇಶ: 2 ಲಕ್ಷ

ತಮಿಳುನಾಡು: 1.38 ಲಕ್ಷ

ಮಹಾರಾಷ್ಟ್ರ: 1.17 ಲಕ್ಷ 

ಕರ್ನಾಟಕ: 1.08 ಲಕ್ಷ