ಕೇರಳದ ವಯನಾಡ್‌ನಿಂದಲೂ ಕಾಂಗ್ರೆಸ್ ಅಧ್ಯಕ್ಷ “ರಾಹುಲ್ ಗಾಂಧಿ” ಸ್ಪರ್ಧೆ

0
291

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್‌ ಪಕ್ಷ ಮಾರ್ಚ್ 31 ರ ಭಾನುವಾರ ಘೋಷಿಸಿದೆ. ಇದು ಕೇರಳದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದರೆ, ಎಡಪಕ್ಷಗಳು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿವೆ. ರಾಹುಲ್ ನಡೆಯನ್ನು ಬಿಜೆಪಿ ಲೇವಡಿ ಮಾಡಿದೆ.

ನವದೆಹಲಿ: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್‌ ಪಕ್ಷ ಮಾರ್ಚ್ 31 ರ  ಭಾನುವಾರ ಘೋಷಿಸಿದೆ. ಇದು ಕೇರಳದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದರೆ, ಎಡಪಕ್ಷಗಳು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿವೆ. ರಾಹುಲ್ ನಡೆಯನ್ನು ಬಿಜೆಪಿ ಲೇವಡಿ ಮಾಡಿದೆ.

ಪಕ್ಷದ ನಾಯಕರಾದ ಎ.ಕೆ. ಆ್ಯಂಟನಿ, ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್ ಮತ್ತು ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಇಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ರಾಹುಲ್ ಸ್ಪರ್ಧೆಯ ವಿಚಾರವನ್ನು ಘೊಷಿಸಿದರು.

‘ಕೇರಳ–ಕರ್ನಾಟಕ–ತಮಿಳುನಾಡಿನ ಗಡಿಗಳು ಸಂಧಿಸುವ ಪ್ರದೇಶದಲ್ಲಿ ವಯನಾಡ್ ಇದೆ. ಈ ಮೂರೂ ರಾಜ್ಯಗಳಲ್ಲಿ ಸ್ಪರ್ಧಿಸುವಂತೆ ರಾಹುಲ್ ಮೇಲೆ ಪಕ್ಷದ ಕಾರ್ಯಕರ್ತರ ಒತ್ತಡವಿತ್ತು. ಹೀಗಾಗಿ ವಯನಾಡ್‌ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಆ್ಯಂಟನಿ ಹೇಳಿದರು.

ಭೌಗೋಳಿಕತೆಯ ಕಾರಣಕ್ಕೆ ರಾಹುಲ್‌ ಅವರು, ವಯನಾಡ್‌ ಅನ್ನು ತಮ್ಮ ಎರಡನೆಯ ಲೋಕಸಭಾ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ರಾಹುಲ್ ಅವರು ಮೊದಲನೇ ಲೋಕಸಭಾ ಕ್ಷೇತ್ರವಾಗಿ ಉತ್ತರಪ್ರದೇಶದ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ‘ಬಿಜೆಪಿಯು ಉತ್ತರ ಹಾಗೂ ದಕ್ಷಿಣ ಭಾರತ ಎಂದು ವಿಭಜನೆ ಮಾಡುತ್ತಿದೆ. ಆದರೆ ದಕ್ಷಿಣ ಭಾರತದ ಸಂಸ್ಕೃತಿ ಆಹಾರ ಪದ್ಧತಿ ಮತ್ತು ವೇಷ ಭೂಷಣಗಳು ಭಾರತದ ಅವಿಭಾಜ್ಯ ಅಂಗವಾಗಿವೆ. ನಾನು ಅವನ್ನೂ ಪ್ರತಿನಿಧಿಸಬೇಕು’ ಎಂದು ನನ್ನೊಂದಿಗೆ ನಡೆಸಿದ ಚರ್ಚೆಯಲ್ಲಿ ರಾಹುಲ್ ಹೇಳಿದ್ದರು’ ಎಂದು ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲೂ ಸ್ಪರ್ಧಿಸುವಂತೆ ಅಲ್ಲಿನ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿಗೆ ಮನವಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ರಾಹುಲ್‌ ಆಗಲೀ, ಕಾಂಗ್ರೆಸ್‌ ಆಗಲೀ ಏನನ್ನೂ ಹೇಳಿರಲಿಲ್ಲ. ಆದರೆ ಕೇರಳದ ವಯನಾಡ್‌ನಿಂದ ಸ್ಪರ್ಧಿಸಲು ರಾಹುಲ್‌ ಆಸಕ್ತಿ ತೋರಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದವು. ಆದರೂ ದಕ್ಷಿಣ ಭಾರತದಿಂದ ರಾಹುಲ್‌ ಸ್ಪರ್ಧಿಸುವ ಬಗ್ಗೆ ಈವರೆಗೆ ಇದ್ದದ್ದು ವದಂತಿಗಳು ಮಾತ್ರ. ಈ ವದಂತಿಗಳಿಗೆ ಕಾಂಗ್ರೆಸ್‌ ಭಾನುವಾರ ಅಂತ್ಯ ಹಾಡಿದೆ.