ಕೇಂದ್ರ ಸರ್ಕಾರದಿಂದ ಎರಡು ಸಂಪುಟ ಸಮಿತಿ ರಚನೆ (ಹೂಡಿಕೆ, ನಿರುದ್ಯೋಗ ಸಮಸ್ಯೆ ನಿವಾರಣೆ ಉದ್ದೇಶ)

0
58

ಹಿಂಜರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎರಡು ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ.

ನವದೆಹಲಿ: ಹಿಂಜರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎರಡು ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ.

ಮೋದಿ ಅಧ್ಯಕ್ಷತೆಯಲ್ಲಿ ‘ಹೂಡಿಕೆ ಮತ್ತು ಅಭಿವೃದ್ಧಿ’ ಕುರಿತ ಸಮಿತಿ ರಚನೆಯಾಗಿದ್ದು, ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹಾಗೂ ರೈಲ್ವೆ ಸಚಿವ ಪೀಯೂಶ್‌ ಗೋಯಲ್‌ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಕುರಿತ ಇನ್ನೊಂದು ಸಂಪುಟ ಸಮಿತಿಯಲ್ಲಿ, ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಪೀಯೂಶ್‌ ಗೋಯಲ್‌, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರಸಿಂಗ್‌ ತೋಮರ್‌, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೊಖ್ರಿಯಾಲ್‌ ನಿಶಾಂಕ್‌, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ಕೌಶಲ ಅಭಿವೃದ್ಧಿ ಸಚಿವ ಎಂ.ಎನ್‌. ಪಾಂಡೆ, ಕಾರ್ಮಿಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಮತ್ತು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು ಸದಸ್ಯರಾಗಿರುತ್ತಾರೆ.

ಈ ಎರಡು ಸಮಿತಿಗಳಲ್ಲದೆ ಭದ್ರತೆಗೆ ಸಂಬಂಧಿಸಿದಂತೆ ಇನ್ನೊಂದು ಸಮಿತಿಯನ್ನು ರಚಿಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನಿರ್ಮಲಾ ಸೀತಾರಾಮಾನ್‌ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಇದರ ಸದಸ್ಯರಾಗಿರುತ್ತಾರೆ.

ಆರ್ಥಿಕ ಹಿಂಜರಿತ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕೃಷಿ ಕ್ಷೇತ್ರದ ಬಿಕ್ಕಟ್ಟು, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಮುಂತಾದ ವಿಚಾರಗಳನ್ನಿಟ್ಟುಕೊಂಡು ವಿರೋಧಪಕ್ಷಗಳು ಕೆಂದ್ರ ಸರ್ಕಾರದ ಮೇಲೆ ದಾಳಿ ಮಾಡುತ್ತಲೇ ಇವೆ. ದೇಶದ ನಿರುದ್ಯೋಗ ಸಮಸ್ಯೆಯು ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ಕಳೆದ ವಾರ ಪ್ರಕಟವಾಗಿದ್ದ ರಾಷ್ಟ್ರೀಯ ಸ್ಯಾಂಪಲ್‌ ಸರ್ವೆ ವರದಿ (ಎನ್‌ಎಸ್‌ಎಸ್‌ಒ) ಬಹಿರಂಗಪಡಿಸಿತ್ತು.

ಕೃಷಿ ಮತ್ತು ತಯಾರಿಕಾ ಕ್ಷೇತ್ರದ ಹಿಂಜರಿಕೆಯಿಂದಾಗಿ 2018–19ರ ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರ ಐದು ವರ್ಷಗಳ ಕನಿಷ್ಠವಾದ ಶೇ 5.8ಕ್ಕೆ ಕುಸಿದಿದೆ ಎಂದು ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿದ್ದವು. ಈ ಕಾರಣಕ್ಕಾಗಿ ಮೋದಿ ಅವರು ಸಂಪುಟ ಸಮಿತಿ ರಚಿಸಿದ್ದಾರೆ ಎನ್ನಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜುಲೈ 5ರಂದು ಕೆಂದ್ರದ ಬಜೆಟ್‌ ಮಂಡಿಸಲಿದ್ದು, ಈ ಸಮಿತಿಗಳು ನೀಡುವ ಸಲಹೆಗಳು ಬಜೆಟ್‌ ತಯಾರಿಕೆಯಲ್ಲಿ ನೆರವಾಗಲಿವೆ ಎನ್ನಲಾಗಿದೆ.