ಕೇಂದ್ರ ಸರ್ಕಾರದಿಂದಲೇ ವಿಜ್ಞಾನ ಚಾನೆಲ್‌ಗಳಿಗೆ ಚಾಲನೆ

0
550

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ದೂರದರ್ಶನವು ವಿಜ್ಞಾನಕ್ಕೆ ಸಂಬಂಧಿಸಿದ ಎರಡು ಚಾನೆಲ್‌ಗಳನ್ನು 2019 ಜನೇವರಿ 15 ರ ಮಂಗಳವಾರದಿಂದ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ (ಪಿಟಿಐ): ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ದೂರದರ್ಶನವು ವಿಜ್ಞಾನಕ್ಕೆ ಸಂಬಂಧಿಸಿದ ಎರಡು ಚಾನೆಲ್‌ಗಳನ್ನು 2019 ಜನೇವರಿ 15 ರ ಮಂಗಳವಾರದಿಂದ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಡಿಡಿ ಸೈನ್ಸ್‌’ ಮತ್ತು ‘ಇಂಡಿಯಾ ಸೈನ್ಸ್‌’ ಹೆಸರಿನ ಈ ವಾಹಿನಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು  ಪ್ರಸಾರ ಮಾಡಲಿವೆ. ದೂರದರ್ಶನ ರಾಷ್ಟ್ರೀಯ ವಾಹಿನಿಯಲ್ಲಿ ‘ಡಿಡಿ ಸೈನ್ಸ್‌’ ಒಂದು ತಾಸು (ಪ್ರತಿದಿನ ಸಂಜೆ 5ರಿಂದ 6ರವರೆಗೆ) ಪ್ರಸಾರವಾಗಲಿದ್ದರೆ, ‘ಇಂಡಿಯಾ ಸೈನ್ಸ್‌’ ಅಂತರ್ಜಾಲ ಆಧರಿತ ವಾಹಿನಿಯಾಗಿದ್ದು, ದಿನದ 24 ತಾಸು ಕಾರ್ಯಕ್ರಮಗಳನ್ನು ನೀಡಲಿದೆ. 

ಚಾನೆಲ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್‌, ‘ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಇಂದು ತೀರಾ ಅಗತ್ಯವಾಗಿದೆ. ಈ ಉದ್ದೇಶವಿಟ್ಟುಕೊಂಡು ಈ ಎರಡು ವಾಹಿನಿಗಳು ಕಾರ್ಯನಿರ್ವಹಿಸಲಿವೆ. ಶೀಘ್ರದಲ್ಲಿಯೇ  ಡಿಡಿ ಸೈನ್ಸ್‌ ಕೂಡ ದಿನದ 24 ತಾಸು ಕಾರ್ಯಕ್ರಮ ನೀಡಲಿದೆ ’ ಎಂದರು. 

www.indiascience.in ಗೆ ಭೇಟಿ ನೀಡುವ ಮೂಲಕ ಇಂಡಿಯಾ ಸೈನ್ಸ್‌ ಚಾನೆಲ್‌ ಅನ್ನು ಅಂತರ್ಜಾಲದಲ್ಲಿ ವೀಕ್ಷಿಸಬಹುದಾಗಿದೆ.