ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಲ್ಲ: ರಂಗಭೂಮಿ ನಿರ್ದೇಶಕ ಎಸ್. ರಘುನಂದನ

0
36

2018ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ರಂಗಭೂಮಿ ನಿರ್ದೇಶಕ ಎಸ್. ರಘುನಂದನ ಅವರು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು: 2018ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ರಂಗಭೂಮಿ ನಿರ್ದೇಶಕ ಎಸ್. ರಘುನಂದನ ಅವರು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

‘ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಅಕಾಡೆಮಿಗೆ ಕೃತಜ್ಞನಾಗಿದ್ದೇನೆ. ಆದರೆ, ದೇಶದ ಹಲ
ವೆಡೆ, ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ, ಆಹಾರದ ಹೆಸರಿನಲ್ಲಿ ಗುಂಪು ಹಲ್ಲೆಗಳು, ಕಗ್ಗೊಲೆಗಳು ನಡೆಯುತ್ತಿವೆ. ಇಂಥ ಭೀಕರ ಹಿಂಸಾಚಾರ ಮತ್ತು ಕಗ್ಗೊಲೆಗಳಿಗೆ ಕಾರಣವಾದ ದ್ವೇಷವನ್ನು ಅಧಿಕಾರದಲ್ಲಿ ಇರುವವರು ಜನರ ಮನಸ್ಸಿನಲ್ಲಿ ತುಂಬುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಮತಾಂಧತೆಯಿಂದ ಕೂಡಿದ ಪಾಠ ಮತ್ತು ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗಳಲ್ಲಿ ತುಂಬುವ ಪ್ರಯತ್ನ ನಡೆಯುತ್ತಿದೆ. ಕನ್ಹಯ್ಯಕುಮಾರ್ ಅಂಥವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಶೋಷಿತರ ಪರ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸುತ್ತಿರುವ‌ವರ ವಿರುದ್ಧ ಯುಎಪಿಎ ಕಾಯಿದೆಯಡಿ ವಿಚಾರಣೆ ನಡೆಸಲಾಗುತ್ತಿದೆ. ಅವರಲ್ಲಿ ಹೆಚ್ಚಿನವರು ಜಾಮೀನು ಸಿಗದೆ ಸೆರೆಮನೆಯಲ್ಲೇ ಇದ್ದಾರೆ. ಹೀಗೆ ಅನ್ಯಾಯ ನಡೆಯುತ್ತಿರುವಾಗ ಪ್ರಶಸ್ತಿ ಸ್ವೀಕರಿಸಲು ಆತ್ಮಸಾಕ್ಷಿ ಒಪ್ಪದು’ ಎಂದಿದ್ದಾರೆ.

‘ಇದು ಪ್ರತಿಭಟನೆಯಲ್ಲ, ವ್ಯಥೆ. ಅಕಾಡೆಮಿಯ ಬಗ್ಗೆ ನನಗೆ ಗೌರವವಿದೆ, ಈಗ ಮತ್ತು ಈ ಹಿಂದೆ ಇಂಥ ಪ್ರಶಸ್ತಿ ಪಡೆದ ನನ್ನೆಲ್ಲ ಸಹೋದ್ಯೋಗಿಗಳ ಬಗ್ಗೆ ಗೌರವವಿದೆ. ಸದಸ್ಯರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತಿದ್ದೇನೆ’ ಎಂದಿದ್ದಾರೆ.