ಕೇಂದ್ರದ ಮಾಜಿ ಸಚಿವ, ಖ್ಯಾತ ವಕೀಲ “ರಾಮ್​​ ಜೇಠ್ಮಲಾನಿ” ನಿಧನ

0
20

ಕೇಂದ್ರದ ಮಾಜಿ ಸಚಿವ, ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ರಾಮ್​​ ಜೇಠ್ಮಲಾನಿ (95) ತಮ್ಮ ದೆಹಲಿಯ ನಿವಾಸದಲ್ಲಿ ಇಂದು (ಸೆಪ್ಟೆಂಬರ್ 8 ರ) ಭಾನುವಾರ ಬೆಳಗ್ಗೆ ನಿಧನರಾದರು.

ನವದೆಹಲಿ: ಕೇಂದ್ರದ ಮಾಜಿ ಸಚಿವ, ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ರಾಮ್​​ ಜೇಠ್ಮಲಾನಿ (95) ತಮ್ಮ ದೆಹಲಿಯ ನಿವಾಸದಲ್ಲಿ ಇಂದು (ಸೆಪ್ಟೆಂಬರ್ 8 ರ) ಭಾನುವಾರ ಬೆಳಗ್ಗೆ ನಿಧನರಾದರು.

ರಾಮ್​​ ಜೇಠ್ಮಲಾನಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದೆರಡು ವಾರಗಳಿಂದ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿತ್ತು. ಮಗ ಮಹೇಶ್​ ಜೇಠ್ಮಲಾನಿ ಜತೆಗೆ ವಾಸವಾಗಿದ್ದರು. ಅವರ ಮಗಳು ಅಮೆರಿಕದಲ್ಲಿ ನೆಲೆಸಿದ್ದಾರೆ.

ರಾಮ್​ ಜೇಠ್ಮಲಾನಿ 1923ರ ಸೆಪ್ಟೆಂಬರ್​ 14ರಂದು ಜನಿಸಿದರು. ಖ್ಯಾತ ವಕೀಲರಾಗಿದ್ದ ಅವರು ಸುಪ್ರೀಂಕೋರ್ಟ್​, ಹೈಕೋರ್ಟ್​, ಅಧೀನ ನ್ಯಾಯಾಲಯಗಳಲ್ಲಿ ಹಲವು ಪ್ರಮುಖ ಪ್ರಕರಣಗಳಗಳಲ್ಲಿ ಹೋರಾಡಿದವರು. ತಮ್ಮ ವಾದ ಮಂಡನೆಯಿಂದಲೇ ನ್ಯಾಯಾಂಗ ಕ್ಷೇತ್ರದಲ್ಲಿ ಪ್ರಖ್ಯಾತಿ ಗಳಿಸಿದ್ದರು.

18ನೇ ವರ್ಷದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ ರಾಮ್​ ಜೇಠ್ಮಲಾನಿ ತಮ್ಮ 13 ವರ್ಷ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್​ ಪೂರ್ಣಗೊಳಿಸಿದ್ದರು. 17ನೇ ವರ್ಷದಲ್ಲಿ ಎಲ್​ಎಲ್​ಬಿ ಪದವಿ ಪಡೆದುಕೊಂಡಿದ್ದರು. ವಾಸ್ತವದಲ್ಲಿ 21ನೇ ವರ್ಷ ಆಗುವವರೆಗೂ ವಕೀಲಿ ವೃತ್ತಿ ಪ್ರಾರಂಭಿಸುವಂತಿಲ್ಲ. ಆದರೆ ನನ್ನ ವಿಚಾರದಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲಾಯಿತು. 18ನೇ ವರ್ಷಕ್ಕೆ ವಕೀಲಿ ವೃತ್ತಿಯಲ್ಲಿ ತೊಡಗಲು ನನಗೆ ಅವಕಾಶ ಸಿಕ್ಕಿತು ಎಂದು 2002ರಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದರು.

2010ರಲ್ಲಿ ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ 6 ಮತ್ತು 7ನೇ ಲೋಕಸಭೆಯಲ್ಲಿ ಮುಂಬೈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಅಟಲ್​ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ 2004ರ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ವಿರುದ್ಧ ಲಖನೌನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ 2010ರಲ್ಲಿ ಬಿಜೆಪಿಯಿಂದಲೇ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದರು.