ಕೆ.ಎಂ.ನಟರಾಜ್‌ ಸುಪ್ರೀಂ ಕೋರ್ಟ್‌ ಎಎಸ್‌ಜಿ

0
755

ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎಂ. ನಟರಾಜ್ ಅವರನ್ನು ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆಗಿ ನೇಮಕ ಮಾಡಲಾಗಿದೆ.

ಬೆಂಗಳೂರು: ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎಂ. ನಟರಾಜ್ ಅವರನ್ನು ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆಗಿ ನೇಮಕ ಮಾಡಲಾಗಿದೆ.

ಈ ಕುರಿತು ಕೇಂದ್ರ ಕಾನೂನು ಸಚಿವಾಲಯ ಇದೇ ಜನೇವರಿ 14ರಂದು ಆದೇಶ ಹೊರಡಿಸಿದೆ. ನಟರಾಜ್ ಸದ್ಯ ದಕ್ಷಿಣ ವಲಯದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದಾರೆ.

1989ರ ಡಿಸೆಂಬರ್‌ನಿಂದ 1990ರ ನವೆಂಬರ್‌ವರೆಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಎರಡು ದಶಕಗಳಿಗೂ ಹೆಚ್ಚಿನ ಸಮಯದ ನಂತರ ಈ ಹುದ್ದೆಗೆ ಕರ್ನಾಟಕದ ಹಿರಿಯ ವಕೀಲರೊಬ್ಬರು ನೇಮಕಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಕೊನೆತೋಟ ಮಹಾಬಲೇಶ್ವರ ನಟರಾಜ್ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಿಂದ ಪದವಿ ಪಡೆದು 1992ರಲ್ಲಿ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರ ಬಳಿ ವೃತ್ತಿ ಆರಂಭಿಸಿದರು.