ಕೆನೆಪದರ : ಆದಾಯ ಮಿತಿ 8 ಲಕ್ಷಕ್ಕೆ ಏರಿಕೆ

0
471

ಹಿಂದುಳಿದ ವರ್ಗಕ್ಕೆ ಸೇರಿದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಅವಕಾಶ ಕಲ್ಪಿಸುವ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು : ಹಿಂದುಳಿದ ವರ್ಗಕ್ಕೆ ಸೇರಿದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಅವಕಾಶ ಕಲ್ಪಿಸುವ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 2018 ರ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಕೆನೆಪದರ ಆದಾಯ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು.

ಈ ಸಂಬಂಧ ಇದೇ 2018 ರ ಸೆಪ್ಟೆಂಬರ್ 14 ರಂದು ಆದೇಶ ಹೊರಬಿದ್ದಿದೆ. ಹಿಂದುಳಿದ ವರ್ಗಗಳ ಪ್ರವರ್ಗ –2ಎ, 2ಬಿ, 3ಎ, 3ಬಿ ಸಮುದಾಯಗಳಿಗೆ ಸೇರಿದ ಅಭ್ಯರ್ಥಿ ಹಾಗೂ ಅವರ ತಂದೆ ಮತ್ತು ತಾಯಿ ಅಥವಾ ಪೋಷಕರ ಆದಾಯ ಮಿತಿಯನ್ನು 8 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಸಾಮಾಜಿಕವಾಗೊ ಮುಂದುವರಿದ ವ್ಯಕ್ತಿಗಳು, ವರ್ಗಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರಗಿಡಲು ಕೆನೆಪದರ ನೀತಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಹೆಚ್ಚು ಇದ್ದ ವ್ಯಕ್ತಿಗಳಿಗೆ ಕೆನೆಪದರ ಮೀಸಲಾತಿಯ ಸೌಲಭ್ಯ ಸಿಗುತ್ತಿರಲಿಲ್ಲ ಈಗ ಆದಾಯ ಮಿತಿ ಏರಿಸಿರುವುದರಿಂದ ಹಿಂದುಳಿದ ವರ್ಗಗಳಿಗೆ ಸೇರಿರುವ ಹೆಚ್ಚಿನ ವ್ಯಕ್ತಿಗಳಿಗೆ ಈ ಸೌಲಭ್ಯ ಸಿಗಲಿದೆ.

2002 ರಲ್ಲಿ ಈ ನೀತಿಯನ್ನು ಜಾರಿಗೆ ತಂದಾಗ ವಾರ್ಷಿಕ ಆದಾಯ ಮಿತಿ 2 ಲಕ್ಷ ಇತ್ತು. 2012 ರಲ್ಲಿ ಇದನ್ನು 3.50 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆ 2013 ಹಾಗೂ 2015 ರಲ್ಲಿ ಈ ಮೊತ್ತವನ್ನು ಕ್ರಮವಾಗಿ 4.50 ಲಕ್ಷ ಹಾಗೂ 6 ಲಕ್ಷಕ್ಕೆ ಏರಿಸಲಾಗಿತ್ತು.