ಕೃಷ್ಣಮಠದ ಗೋಪುರಕ್ಕೆ ಚಿನ್ನದ ಹೊದಿಕೆ (ಕಾಮಗಾರಿಗೆ ನಾಳೆ( ನವೆಂಬರ್ 28) ಚಾಲನೆ; 100 ಕೆ.ಜಿ ಚಿನ್ನ ಬಳಕೆ)

0
223

ಉಡುಪಿ ‘ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡನ್ನು ಹೊದಿಸುವ ಕಾರ್ಯಕ್ಕೆ ಇದೇ 28ರಂದು ಶ್ರೀಕೃಷ್ಣ ಮಠದಲ್ಲಿ ಚಾಲನೆ ನೀಡಲಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಕೃಷ್ಣನಿಗೆ ಸಮರ್ಪಿಸಲಾಗುತ್ತದೆ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.

ಉಡುಪಿ: ‘ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡನ್ನು ಹೊದಿಸುವ ಕಾರ್ಯಕ್ಕೆ ಇದೇ ನವೆಂಬರ್ 28ರಂದು ಶ್ರೀಕೃಷ್ಣ ಮಠದಲ್ಲಿ ಚಾಲನೆ ನೀಡಲಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಕೃಷ್ಣನಿಗೆ ಸಮರ್ಪಿಸಲಾಗುತ್ತದೆ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.

ಸೋಮವಾರ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದ್ವಿತೀಯ ಪರ್ಯಾಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕೃಷ್ಣಮಠ ಸುವರ್ಣ ಗೋಪುರ ನಿರ್ಮಾಣ ಕೂಡ ಒಂದಾಗಿದೆ. ಸುಮಾರು 100 ಕೆ.ಜಿ. ಚಿನ್ನ ಬಳಸಲಾಗುತ್ತಿದ್ದು, 32 ಕೋಟಿ ವೆಚ್ಚದ ಯೋಜನೆ ಇದಾಗಿದೆ’ ಎಂದರು.

‘ಭಗವಂತನನ್ನು ಗರ್ಭಗುಡಿಯಲ್ಲಿ ಮಾತ್ರವಲ್ಲದೇ ಗೋಪುರ ಮೂಲಕವೂ ಕಾಣಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಗರ್ಭಗುಡಿಯಷ್ಟೇ ಪ್ರಾಮುಖ್ಯತೆಯನ್ನು ಗೋಪುರಕ್ಕೂ ನೀಡಲಾಗಿದೆ. ದ್ರಾವಿಡ ವಾಸ್ತು
ಶೈಲಿಯಲ್ಲಿ ದೇವಸ್ಥಾನದ ಗೋಪುರವನ್ನು ಚಾವಣಿಯಂತೆ ನಿರ್ಮಿಸುವುದು ವಾಡಿಕೆ. ಈ ನಿಟ್ಟಿನಲ್ಲಿ ಮರ, ಬೆಳ್ಳಿ ಮತ್ತುಚಿನ್ನದ ತಗಡುಗಳನ್ನು ಬಳಸಿ ಕರಾವಳಿ ಶೈಲಿಯ ಹಂಚಿನ ಆಕೃತಿಯಲ್ಲಿ ಗೋಪುರ ನಿರ್ಮಿಸಲಾಗುವುದು’ ಎಂದು ಹೇಳಿದರು.

‘ಗೋಪುರಕ್ಕೆ ಚಿನ್ನದ ತಗಡನ್ನು ಹೊದಿಸುವ ಸಂದರ್ಭದಲ್ಲಿ ಪಾದರಸ ಹಾಗೂ ಕೆಮಿಕಲ್‌ ಬಳಸದಂತೆ ಭಕ್ತರು ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಬಳಸಿ ದೀರ್ಘ ಬಾಳಿಕೆಯ ಕಾಮಗಾರಿ ಹಾಗೂ ಗರಿಷ್ಠ ಪ್ರಮಾಣದ ಚಿನ್ನದ ಬಳಕೆಗೆ ಯೋಜನೆಯಲ್ಲಿ ಬದಲಾವಣೆ ತರಲಾಗಿದೆ. ವಿಶ್ವಕರ್ಮ ಸಮುದಾಯದ ಕುಶಲಕರ್ಮಿಗಳು ಕಾಷ್ಠಶಿಲ್ಪದಲ್ಲಿ ಸಹಕರಿಸಿದರೆ, ದೈವಜ್ಞ ಸಮುದಾಯದ ಕುಶಲಕರ್ಮಿಗಳು ಬೆಳ್ಳಿ- ಚಿನ್ನದ ಕೆಲಸದಲ್ಲಿ ಸಹಕರಿಸುವರು’ ಎಂದರು.

‘ಗೋಪುರವನ್ನು ಆಕರ್ಷಕವಾಗಿಸುವ ಉದ್ದೇಶದಿಂದ ಸುವರ್ಣ ಗೋಪುರದ ತಗಡಿನಲ್ಲಿ ಮಧ್ವಾ
ಚಾರ್ಯರ ಸರ್ವಮೂಲ ಗ್ರಂಥಗಳನ್ನು ಲೇಸರ್‌ ಮೂಲಕ ಬರೆಸಲಾಗುವುದು. ಜೊತೆಗೆ 21,600 ಹಂಸಮಂತ್ರವನ್ನು ದಾಖಲಿಸಲಾಗುವುದು. ಕೃಷ್ಣ ದರ್ಶನದ ಮೂಲಕ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸಬೇಕೆಂಬ ಆಶಯದಲ್ಲಿ ಅಪೂರ್ವವಾದ ಗ್ರಂಥ ಸಂಗ್ರಹದ ಕೆತ್ತನೆಯನ್ನು ಪಡಿ ಮೂಡಿಸಲಾಗುವುದು’ ಎಂದು ವಿವರಿಸಿದರು.

60 ಕೆ.ಜಿ ಸಂಗ್ರಹ

‘ಈ ಹಿಂದೆ ತಾಮ್ರದ ತಗಡಿನ ಮೇಲೆ ಚಿನ್ನದ ತಗಡನ್ನು ಹೊದಿಸುವ ಯೋಜನೆ ಇತ್ತು. ಆದರೆ, ಪ್ರಸ್ತುತ ಬೆಳ್ಳಿಯ ತಗಡಿನ ಮೇಲೆ ಚಿನ್ನದ ತಗಡನ್ನು ಹಾಕಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ಕೆ ಸುಮಾರು 500 ಕೆ.ಜಿ. ಬೆಳ್ಳಿ ಅಗತ್ಯವಿದೆ. ಗರಿಷ್ಠ ಪ್ರಮಾಣದ ಚಿನ್ನ ಬಳಕೆಯಾಗಬೇಕೆಂಬ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ’ ಎಂದು ವಿದ್ಯಾಧೀಶ ಸ್ವಾಮೀಜಿ ತಿಳಿಸಿದರು.

‘ಈ ಹಿಂದೆ ಗೋಪುರದ ಪ್ರತಿ ಚದರಡಿಗೆ ಸುಮಾರು 40 ಗ್ರಾಂ ಚಿನ್ನ ಬಳಸಲು ಅಂದಾಜಿಸಲಾಗಿತ್ತು. ಆದರೆ, ಇದೀಗ ಬಂಗಾರವನ್ನು ಬೆಳ್ಳಿಯ ತಗಡಿನ ಮೇಲೆ ಎರಕ ಹೊಯ್ಯುತ್ತಿರುವುದರಿಂದ ಪ್ರತಿ ಚದರಡಿಗೆ ಸುಮಾರು 50 ಗ್ರಾಂ ಚಿನ್ನ ಬಳಕೆ ಮಾಡಲಾಗುತ್ತದೆ. ಸುಮಾರು 2,500 ಚದರಡಿಗಳಿಗೆ ಚಿನ್ನದ ಹೊದಿಕೆ ಹಾಕಲಾಗುತ್ತದೆ. ಈಗಾಗಲೇ ಭಕ್ತರಿಂದ ಸುಮಾರು 60 ಕೆ.ಜಿ.ಯಷ್ಟು ಚಿನ್ನ ಸಂಗ್ರಹವಾಗಿದೆ. ಉಳಿದ 45 ಕೆ.ಜಿ. ಚಿನ್ನ ಶೀಘ್ರದಲ್ಲೇ ಸಂಗ್ರಹವಾಗುವ ವಿಶ್ವಾಸವಿದೆ’ ಎಂದರು.