ಕೃಷಿ ಆದಾಯ ದುಪ್ಪಟ್ಟಿಗೆ ಬಜೆಟ್ ಮೊತ್ತ ಹೆಚ್ಚಳ : ಪ್ರಧಾನಿ ಮೋದಿ

0
26

2022ರ ವೇಳೆಗೆ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಲಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಕೆಲಸವನ್ನು ಸರ್ಕಾರ ಮಾಡಿದ್ದು, ಕೃಷಿ ಬಜೆಟ್ ಮೊತ್ತವನ್ನು 2.12 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ: 2022ರ ವೇಳೆಗೆ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಲಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಕೆಲಸವನ್ನು ಸರ್ಕಾರ ಮಾಡಿದ್ದು, ಕೃಷಿ ಬಜೆಟ್ ಮೊತ್ತವನ್ನು 2.12 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದ 600 ಜಿಲ್ಲೆಗಳ 2 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೆರೆದಿದ್ದ ಕೃಷಿಕರೊಂದಿಗೆ ನಮೋ ಆಪ್ ಮೂಲಕ ಜೂನ್ 20 ರ ಬುಧವಾರ ಪ್ರಧಾನಿ ನೇರ ಸಂವಾದ ನಡೆಸಿದರು.

ಕೃಷಿಕರ ಆದಾಯ ದ್ವಿಗುಣಗೊಳಿಸಲು ಸರ್ಕಾರ ನಾಲ್ಕು ಅಂಶಗಳ ನೀತಿಗೆ ಒತ್ತು ಕೊಡುತ್ತಿದೆ. ಕೃಷಿ ಚುಟವಟಿಕೆ ಹೂಡಲಾಗುವ ವೆಚ್ಚ ಕಡಿತ, ಬೆಳೆಗೆ ಸೂಕ್ತ ಬೆಲೆ, ಕೊಯ್ಲು ನಂತರದ ನಷ್ಟಗಳ ಇಳಿಕೆ ಮತ್ತು ಕೃಷಿಕರಿಗೆ ಪರ್ಯಾಯ ಆದಾಯ ಮಾರ್ಗಗಳನ್ನು ಕಲ್ಪಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಹಿಂದಿನ ಸರ್ಕಾರ ತನ್ನ ಆಡಳಿತದ ಐದು ವರ್ಷಗಳಲ್ಲಿ ಕೃಷಿ ಬಜೆಟ್​ಗಾಗಿ 1.21 ಲಕ್ಷ ಕೋಟಿ ರೂ. ಮೀಸಲಿಟ್ಟಿತ್ತು. ಆದರೆ 2014-19ರಲ್ಲಿ ನಮ್ಮ ಸರ್ಕಾರ ಈ ಮೊತ್ತವನ್ನು 2.12 ಲಕ್ಷ ಕೋಟಿ ರೂ. ಅಂದರೆ ದ್ವಿಗುಣ ಮೀಸಲಿಟ್ಟಿದೆ. ಇದು ನಮಗೆ ಕೃಷಿಕರ ಕಡೆಗಿರುವ ಬದ್ಧತೆಗೆ ಸಾಕ್ಷಿ ಎಂದು ಮೋದಿ ಹೇಳಿದರು.

ಇದೇ ತಿಂಗಳ 27ಕ್ಕೆ ಆರ್ಥಿಕವಾಗಿ ದುರ್ಬಲ ವರ್ಗದವರೊಂದಿಗೆ ನರೇಂದ್ರ ಮೋದಿ ಆಪ್ ಮೂಲಕ ಸಂವಾದ ನಡೆಸುವುದಾಗಿ ಪ್ರಧಾನಿ ತಿಳಿಸಿದರು.

ಕರ್ನಾಟಕ ರೈತರ ಜತೆ 10 ನಿಮಿಷ ಮಾತು

ಮಾಗಡಿ ತಾಲೂಕಿನ ಚಂದೂರಾಯನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಾವೇಶಗೊಂಡ ರೈತರು ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ಅವರೊಟ್ಟಿಗೆ ಸಂವಾದದಲ್ಲಿ ಪಾಲ್ಗೊಂಡರು.

ಮೊದಲಿಗೆ ಮಾಗಡಿ ತಾಲೂಕು ಬೆಟ್ಟಹಳ್ಳಿಯ ಜಯರಾಮಯ್ಯ ಮಾತನಾಡಿ, ಮಣ್ಣಿನ ಆರೋಗ್ಯ ಕಾರ್ಡ್​ನಿಂದ ತಮಗೆ ಆದ ಲಾಭದ ಕುರಿತು ವಿವರಿಸಿದರು. ನಂತರ ರಾಮನಗರ ತಾಲೂಕಿನ ಮಾಯಗಾನಹಳ್ಳಿಯ ಪ್ರಗತಿಪರ ರೈತ ಮಹಿಳೆ ಕಮಲಮ್ಮ ಜತೆ ಪ್ರಧಾನಿ ಮಾತು ಆರಂಭಿಸಿದರು. ಕಮಲಮ್ಮ ಅವರ ನಮಸ್ಕಾರಕ್ಕೆ ಪ್ರತಿಯಾಗಿ ಕನ್ನಡದಲ್ಲಿಯೇ ಪ್ರತಿವಂದನೆ ಹೇಳಿ ‘ ನಮಸ್ತೆ ಕಮಲಮ್ಮ, ನೀವು ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಎಲ್ಲರೂ ಕ್ಷೇಮವೇ ’ ಎಂದು ಕೇಳಿದರು. ಮೋದಿಯವರ ಕನ್ನಡ ಪ್ರೇಮ ಕಂಡು ನೆರೆದಿದ್ದ ರೈತರು ಆಶ್ಚರ್ಯ ಚಕಿತರಾದರು.

ಟೇಬಲ್ ಮೇಲೆ ಜೋಡಿಸಿದ್ದ ಮಾವು, ಹಲಸು, ತೆಂಗು, ಪಪ್ಪಾಯ ಹಾಗೂ ತರಕಾರಿಗಳನ್ನು ಕಂಡು ಖುಷಿಯಾದ ಮೋದಿಯವರು ಋತುವಿನ ಎಲ್ಲ ಹಣ್ಣುಗಳ ದರ್ಶನ ಮಾಡಿಸುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೇನುಸಾಕಣೆ ಬಗ್ಗೆ ಕೃಷಿಕರು ಹೆಚ್ಚು ಗಮನಹರಿಸಬೇಕಿದೆ. ಬ್ಲೂ ರೆವಲ್ಯೂಷನ್ (ಮೀನುಗಾರಿಕೆ ವಲಯದಲ್ಲಿ ಕ್ರಾಂತಿ) ರಾಷ್ಟ್ರೀಯ ಯೋಜನೆಗೆ ಸರ್ಕಾರ ಹೆಚ್ಚು ಒತ್ತು ಕೊಡುತ್ತಿದೆ. ಕೃಷಿ ವಿಕಾಸ ಯೋಜನೆ ಅಡಿಯಲ್ಲಿ 21 ಲಕ್ಷ ಹೆಕ್ಟೇರ್​ಪ್ರದೇಶವನ್ನು ಸಾವಯವ ಕೃಷಿಭೂಮಿಯಾಗಿಸಲಾಗಿದೆ.

       – :  ನರೇಂದ್ರ ಮೋದಿ ಪ್ರಧಾನಿ