ಕೃಷಿ ಆದಾಯಕ್ಕೆ ತೆರಿಗೆ ಇಲ್ಲ; ರಿಟರ್ನ್ಸ್‌ನಲ್ಲಿ ದಾಖಲಿಸಿ

0
68

ದೇಶದಲ್ಲಿ ಕೇವಲ ಅಪ್ಪಟ ಕೃಷಿ ಮೂಲದಿಂದ ಮಾತ್ರ ಸಿಗುವ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಅದು ಕೋಟ್ಯಂತರ ರೂ. ಕೃಷಿ ವರಮಾನ ಇದ್ದರೂ, ಅದು ತೆರಿಗೆ ಮುಕ್ತ ಆದಾಯವಾಗಿರುತ್ತದೆ. ಆದರೆ ಒಂದು ವೇಳೆ ನಿಮಗೆ ಕೃಷಿಯೇತರ ವೃತ್ತಿ, ಉದ್ಯೋಗಗಳಿಂದ ಸಂಬಳದ ಜತೆಗೆ, ಕೃಷಿ ಮೂಲದ ಆದಾಯ ಇದ್ದರೆ, ಅದನ್ನು ಐಟಿ ರಿಟರ್ನ್ಸ್‌ನಲ್ಲಿ ತೋರಿಸಬೇಕಾಗುತ್ತದೆ.

ಬೆಂಗಳೂರು: ದೇಶದಲ್ಲಿ ಕೇವಲ ಅಪ್ಪಟ ಕೃಷಿ ಮೂಲದಿಂದ ಮಾತ್ರ ಸಿಗುವ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಅದು ಕೋಟ್ಯಂತರ ರೂ. ಕೃಷಿ ವರಮಾನ ಇದ್ದರೂ, ಅದು ತೆರಿಗೆ ಮುಕ್ತ ಆದಾಯವಾಗಿರುತ್ತದೆ. ಆದರೆ ಒಂದು ವೇಳೆ ನಿಮಗೆ ಕೃಷಿಯೇತರ ವೃತ್ತಿ, ಉದ್ಯೋಗಗಳಿಂದ ಸಂಬಳದ ಜತೆಗೆ, ಕೃಷಿ ಮೂಲದ ಆದಾಯ ಇದ್ದರೆ, ಅದನ್ನು ಐಟಿ ರಿಟರ್ನ್ಸ್‌ನಲ್ಲಿ ತೋರಿಸಬೇಕಾಗುತ್ತದೆ. ಹಾಗೂ ಆಗ ನಿಮ್ಮ ತೆರಿಗೆ ದರದ ಲೆಕ್ಕಾಚಾರದಲ್ಲಿ ಬದಲಾವಣೆಯಾಗಬಹುದು. ಹಾಗೂ ಅದಕ್ಕೆ ತೆರಿಗೆ ಕಟ್ಟಲೇಬೇಕಾಗುತ್ತದೆ. ಹೀಗಾಗಿ ವೇತನದಾರರು ಕೃಷಿ ಮೂಲದ ಆದಾಯವನ್ನು ಹೊಂದಿದ್ದರೆ, ಅದನ್ನು ಐಟಿ ರಿಟರ್ನ್ಸ್‌ನಲ್ಲಿ ದಾಖಲಿಸಬೇಕು ಎಂದು ಚಾರ್ಟರ್ಡ್‌ ಅಕೌಂಟೆಂಟ್‌ಗಳು ಸಲಹೆ ನೀಡಲು ಮರೆಯದಿರುವುದಿಲ್ಲ. 

”ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 10(1) ಪ್ರಕಾರ ಕೃಷಿ ಮೂಲದ ಆದಾಯ ತೆರಿಗೆ ಮುಕ್ತ. ಹಾಗಾದರೆ ರಿಟರ್ನ್ಸ್‌ನಲ್ಲಿ ಯಾಕೆ ತೋರಿಸಬೇಕು? ತೆರಿಗೆ ದರ ನಿರ್ಣಯಿಸುವ ಸಲುವಾಗಿ ಕೃಷಿ ಮೂಲದ ಆದಾಯವನ್ನೂ ತೋರಿಸಬೇಕು” ಎನ್ನುತ್ತಾರೆ ತೆರಿಗೆ ತಜ್ಞ ವಿಜಯ್‌ ಶೆಣೈ. 

ಯಾವುದು ಕೃಷಿ ಮೂಲದ ಆದಾಯ? 

1. ಕೃಷಿ ಚಟುವಟಿಕೆಗಳಿಗೆ ಬಳಸಿದ ಭೂಮಿಯಿಂದ ಸಿಗುವ ಬಾಡಿಗೆ ಅಥವಾ ವರಮಾನ 

2. ಕೃಷಿ ಭೂಮಿಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರಾಟ, ವಿಕ್ರಯ ಮಾಡಿದರೂ, ಕೃಷಿ ಆದಾಯವೆಂದು ಪರಿಗಣನೆಯಾಗುತ್ತದೆ.

3. ಫಾರ್ಮ್‌ ಹೌಸ್‌ ಮೂಲದಿಂದ ಸಿಗುವ ಆದಾಯ. 

4.ನರ್ಸರಿ ಇತ್ಯಾದಿಗಳಲ್ಲಿ ಸಸಿಗಳ ಬೆಳೆಸುವಿಕೆ, ಬೀಜಗಳ ವಿಕ್ರಯ ಇತ್ಯಾದಿಗಳೂ ಕೃಷಿ ಆದಾಯವಾಗುತ್ತದೆ. 

5. ಕೃಷಿ ಭೂಮಿಯ ಮಾಲಿಕತ್ವ ಮುಖ್ಯವಾಗುವುದಿಲ್ಲ. 

ಯಾವುದು ಅಪ್ಪಟ ಕೃಷಿ ಆದಾಯವಲ್ಲ? 

1. ಕೋಳಿ ಸಾಕಣೆಯಿಂದ (ಕುಕ್ಕುಟೋದ್ಯಮ) ಸಿಗುವ ಆದಾಯ. 

2. ಜೇನು ಸಾಕಣೆಯ ವರಮಾನ. 

3. ತನ್ನಿಂತಾನೆ ಬೆಳೆದಿರುವ ಮರಗಳ ವಿಕ್ರಯದಿಂದ ಸಿಕ್ಕಿದ ಆದಾಯ 

4. ಬೆಳೆದು ನಿಂತ ಫಸಲಿನ ಖರೀದಿ. 

5. ಕಂಪನಿಯೊಂದರ ಕೃಷಿ ಆದಾಯದ ಡಿವಿಡೆಂಡ್‌. 

6. ಉಪ್ಪಿನ ಮಾರಾಟದಿಂದ ಬರುವ ಆದಾಯ. 

7. ಗಣಿಗಾರಿಕೆಯ ರಾಯಲ್ಟಿ. 

8. ಫಾರ್ಮ್‌ ಹೌಸ್‌ನಲ್ಲಿ ಟಿ.ವಿ ಧಾರಾವಾಹಿ ಚಿತ್ರೀಕರಣದಿಂದ ಸಿಕ್ಕಿದ ಆದಾಯ. 

ಕೃಷಿ ಆದಾಯದ ತೆರಿಗೆ ಲೆಕ್ಕಾಚಾರ : 
ನೀವು ವೇತನದಾರರಾಗಿದ್ದು, ಕೃಷಿ ಮೂಲದ ಆದಾಯ ಇದೆ ಎಂದಿಟ್ಟುಕೊಳ್ಳಿ. ತೆರಿಗೆ ತಜ್ಞರು ಮೊದಲಿಗೆ ನಿಮ್ಮ ನಿವ್ವಳ , ಕೃಷಿ ಆದಾಯ ಮತ್ತು ಕೃಷಿಯೇತರ ಆದಾಯವನ್ನು ಲೆಕ್ಕ ಮಾಡುತ್ತಾರೆ. ಎರಡನೇ ಹಂತದಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಗೆ ಕೃಷಿ ಆದಾಯ ಸೇರಿಸಿ, ಒಟ್ಟು ಆದಾಯ ತೆರಿಗೆ ಮಿತಿ ವಿಸ್ತರಣೆಯಾದಂತಾಗುತ್ತದೆ. ಯಾಕೆಂದರೆ ಕೃಷಿ ಆದಾಯಕ್ಕೆ ತೆರಿಗೆ ಇಲ್ಲ. ಮೂರನೇ ಹಂತದಲ್ಲಿ ಮೊದಲನೆಯ ಹಾಗೂ ಎರಡನೆಯ ಹಂತದ ಮೊತ್ತದ ವ್ಯತ್ಯಾಸವನ್ನು ಲೆಕ್ಕಾಚಾರ ಮಾಡುತ್ತಾರೆ. ಈ ಮೊತ್ತಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. 

”ಕೇವಲ ಕೃಷಿ ಆದಾಯಕ್ಕೆ ತೆರಿಗೆ ಇರದಿದ್ದರೂ, ಹಲವಾರು ವಾಣಿಜ್ಯ ಬೆಳೆಗಳಿಗೆ, ಕೃಷಿ ಸಂಬಂಧಿತ ಚಟುವಟಿಕೆಗಳಾದ ಕೋಳಿ ಸಾಕಣೆ, ಮೀನುಗಾರಿಕೆ ಇತ್ಯಾದಿಗಳ ಮೂಲಕ ಸಿಗುವ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತದೆ. ಇಂಥ ಆದಾಯಗಳಿಂದ ಸಿಗುವ ಹಣವನ್ನು ಬೆಳೆಗಾರರು ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಯಾಗಿಸಿದಾಗ, ಟಿಡಿಎಸ್‌ ಮೂಲಕ ಮೂಲದಲ್ಲಿಯೇ ತೆರಿಗೆ ಕಡಿತವಾಗುತ್ತದೆ. ಆದರೆ ಇಲ್ಲೂ ತೆರಿಗೆ ವಿನಾಯಿತಿ ಪಡೆಯಲು ಅವಕಾಶಗಳಿರುತ್ತವೆ” ಎನ್ನುತ್ತಾರೆ ತೆರಿಗೆ ತಜ್ಞರಾದ ರಾಜಶೇಖರ್‌. 

ತೆರಿಗೆ ವಂಚನೆ ಕಷ್ಟಕರ: ಈಗ ಪ್ಯಾನ್‌ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಗಳ ನಡುವೆ ಲಿಂಕ್‌ ಕಡ್ಡಾಯವಾಗಿರುವುದರಿಂದ, ವೇತನದಾರರು ಕೃಷಿ ಮೂಲದ ಆದಾಯವನ್ನು ಬಚ್ಚಿಟ್ಟರೆ ಆದಾಯ ತೆರಿಗೆ ಇಲಾಖೆಗೆ ಗೊತ್ತಾಗದು ಎಂದು ಭಾವಿಸಿದರೆ ತಪ್ಪಾಗಲಿದೆ. ಆದ್ದರಿಂದ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಸಲಹೆ ಪಡೆಯುವುದು ಸೂಕ್ತ.