ಕುಸ್ತಿ : ವಿನೇಶಾ ಪೋಗಟ್‌ಗೆ ಚಿನ್ನದ ಗರಿ

0
29

ಭಾರತದ ತಾರಾ ಕುಸ್ತಿಪಟು ವಿನೇಶಾ ಪೋಗಟ್ ಅವರು ಯಾಸರ್‌ ದೋಗು ಅಂತರ ರಾಷ್ಟ್ರೀಯ ಟೂರ್ನಿಯ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಇಸ್ತಾನ್‌ಬುಲ್‌ (ಪಿಟಿಐ): ಭಾರತದ ತಾರಾ ಕುಸ್ತಿಪಟು ವಿನೇಶಾ ಪೋಗಟ್ ಅವರು ಯಾಸರ್‌ ದೋಗು ಅಂತರ ರಾಷ್ಟ್ರೀಯ ಟೂರ್ನಿಯ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಜುಲೈ 14 ರ ಭಾನುವಾರ ನಡೆದ ಫೈನಲ್‌ ಬೌಟ್‌ನಲ್ಲಿ ರಷ್ಯಾದ ಎಕಟೆರಿನಾ ಪೊಲೆಶ್ಚುಕ್‌ ವಿರುದ್ಧ ಅವರು ಸುಲಭದ ಜಯ ಸಾಧಿಸಿದರು.

ಸ್ಪೇನ್‌ನಲ್ಲಿ ನಡೆದ ಗ್ರ್ಯಾಂಡ್‌ಪ್ರಿಕ್ಸ್‌ನಲ್ಲಿ ಅಗ್ರಸ್ಥಾನ ಪಡೆದಿದ್ದ ವಿನೇಶ್‌ ಇಲ್ಲಿಯೂ ಪ್ರಾಬಲ್ಯ ಮುಂದು ವರಿಸಿದರು. 9–5 ಪಾಯಿಂಟ್‌ಗಳಿಂದ ಎದುರಾಳಿ ವಿರುದ್ಧ ಗೆದ್ದು ಬೀಗಿದರು. ಇದು ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು) ರ‍್ಯಾಂಕಿಂಗ್‌ ಸಿರೀಸ್‌ ಟೂರ್ನಿಯಾಗಿದೆ.

ಭಾರತದ ಸೀಮಾ (50 ಕೆಜಿ) ಮತ್ತು ಮಂಜು (59 ಕೆಜಿ) ಕೂಡ ತಮ್ಮ ವಿಭಾಗಗಳಲ್ಲಿ ಸ್ವರ್ಣ ಪದಕ ಪಡೆದರು. ಚಿನ್ನದ ಪದಕ ಗಳಿಸುವ ಹಾದಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ವಿನೇಶ್‌ ಎರಡು ಪಂದ್ಯಗಳನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಗೆದ್ದಿದ್ದರು.

ದಿವ್ಯಾ ಕಕ್ರಾನ್‌ (68 ಕೆಜಿ) ಹಾಗೂ ಪೂಜಾ ಧಂಡಾ (57 ಕೆಜಿ) ಅವರಿಗೆ ಪದಕದ ಸುತ್ತು ಪ್ರವೇಶಿಸಲಾಗಲಿಲ್ಲ. ದಿವ್ಯಾ ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದರೆ, ಪೂಜಾ ಕ್ವಾರ್ಟರ್‌ಫೈನಲ್‌ನಲ್ಲಿ ಎಡವಿದರು.

ಒಲಿಂಪಿಕ್‌ ಕಂಚು ವಿಜೇತ ಸಾಕ್ಷಿ ಮಲಿಕ್‌ ಕೂಡ ಪದಕದ ಸುತ್ತಿಗೆ ಪ್ರವೇಶಿಸಲಿಲ್ಲ.

ಪುರುಷರ ಫ್ರೀಸ್ಟೈಲ್‌ ವಿಭಾಗದಲ್ಲಿ ರಾಹುಲ್‌ ಅವಾರೆ (61 ಕೆಜಿ) ಅವರು ಟರ್ಕಿಯ ಮುನೀರ್‌ ಅಕ್ತಾಸ್‌ ಅವರನ್ನು 4–1ರಿಂದ ಸೋಲಿಸಿ ವೃತ್ತಿಜೀವನದಲ್ಲಿ ಮೊದಲ ರ‍್ಯಾಂಕಿಂಗ್‌ ಸಿರೀಸ್‌ ಪ್ರಶಸ್ತಿ ಗೆದ್ದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಉತ್ಕರ್ಷ್‌ ಕಾಳೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

86 ಕೆಜಿ ವಿಭಾಗದಲ್ಲಿ ದೀಪಕ್‌ ಪುನಿಯಾ ಬೆಳ್ಳಿ ಪದಕ ತಮ್ಮದಾಗಿಸಿ ಕೊಂಡರು.

ಫೈನಲ್‌ ಪಂದ್ಯದಲ್ಲಿ ಅಜರ್‌ಬೈಜಾನ್‌ನ ಅಲೆಕಾಂಡ್ರ ಗೊಸ್ತಿಯೆವ್‌ ವಿರುದ್ಧ ಅವರು ಸೋತರು. 125 ಕೆಜಿ ವಿಭಾಗದಲ್ಲಿ ಸುಮಿತ್‌ ಭಾರತಕ್ಕೆ ಮತ್ತೊಂದು ಕಂಚು ಗೆದ್ದರು.

ಸೋನ್ಬಾ ತಾನಾಜಿ ಗೊಂಗನೆ (65 ಕೆಜಿ), ರಜನೀಶ್‌ (70 ಕೆಜಿ), ವಿಕಿ (92 ಕೆಜಿ) ಕಂಚಿನ ಪದಕದ ಸುತ್ತಿನ ಪಂದ್ಯದಲ್ಲಿ ಸೋತರು. ಅಮಿತ್‌ ಧನಗರ್‌ (74 ಕೆಜಿ) ಮತ್ತು ಸತ್ಯವ್ರತ್‌ ಕಡಿಯಾನ್‌ (97 ಕೆಜಿ) ಅವರು ಅರ್ಹತಾ ಸುತ್ತನ್ನೂ ದಾಟಲಿಲ್ಲ.