ಕಿಂಗ್ಸ್‌ ಇಲೆವನ್‌ ಪಂಜಾಬ್‌ಗೆ ಅನಿಲ್ ಕುಂಬ್ಳೆ ಕೋಚ್

0
8

ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆಡುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

ನವದೆಹಲಿ (ಪಿಟಿಐ): ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆಡುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

ಇನ್ನೊಬ್ಬ ಕನ್ನಡಿಗ ಆಟಗಾರ ಸುನಿಲ್ ಜೋಶಿ ಅವರು ಸಹಾಯಕ ಕೋಚ್  ಮತ್ತು ಪ್ರತಿಭಾ ಶೋಧದ ಮುಖ್ಯಸ್ಥರಾಗಿ  ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಶ್ ಅವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್‌ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಕನ್ನಡಿಗ ಅನಿಲ್ ಕುಂಬ್ಳೆ ಅವರು ಭಾರತ ತಂಡದ ನಾಯಕರಾಗಿದ್ದರು. ಎರಡು ವರ್ಷಗಳ ಹಿಂದೆ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ವೀಕ್ಷಕ ವಿವರಣೆಕಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಐಸಿಸಿ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿರುವ ಅನಿಲ್ ಕಿಂಗ್ಸ್‌ ತಂಡವನ್ನು ಸದೃಢಗೊಳಿಸುವತ್ತ ಯೋಜನೆ ರೂಪಿಸಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹಮಾಲೀಕರಾಗಿರುವ ತಂಡ ಇದು.

‘ತಂಡದಲ್ಲಿ ಯಾವ ಆಟಗಾರರನ್ನು ಉಳಿಸಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬುದನ್ನು ಕುಂಬ್ಳೆ ನಿರ್ಧರಿಸುವರು. ಮುಂದಿನ ತಿಂಗಳು ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟ್ರೋಫಿ ಟೂರ್ನಿಯಲ್ಲಿ ಪ್ರತಿಭಾ ಶೋಧ ನಡೆಸುವ ಉದ್ದೇಶವಿದೆ’ ಎಂದು ತಂಡದ ಮೂಲಗಳು ತಿಳಿಸಿವೆ.

ಅನಿಲ್ ಅವರು 2013ರಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮಾರ್ಗದರ್ಶಕರಾಗಿದ್ದರು.  48 ವರ್ಷದ ಅನಿಲ್ ಈಗ ಐಪಿಎಲ್‌ನಲ್ಲಿ ಹೊಸ ಇನಿಂಗ್ಸ್‌ ಆರಂಭಿಸಲಿದ್ದಾರೆ.