ಕಾಶ್ಮೀರ: ಪೊಲೀಸ್‌ ಇಲಾಖೆ ಆಧುನೀಕರಣಕ್ಕೆ ಕೇಂದ್ರ ಸರ್ಕಾರದಿಂದ 1000 ಕೋಟಿ ಅನುದಾನ

0
9

ಗುಂಡು ನಿರೋಧಕ (ಬುಲೆಟ್‌ಪ್ರೂಫ್‌) ಅತ್ಯಾಧುನಿಕ ವಾಹನ, ಬುಲೆಟ್‌ಪ್ರೂಫ್‌ ಜಾಕೆಟ್‌ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗಾಗಿ ಜಮ್ಮು ಕಾಶ್ಮೀರ ಪೊಲೀಸ್‌ ಇಲಾಖೆಗೆ ಕೇಂದ್ರ ಸರ್ಕಾರ 1000 ಕೋಟಿ ಅನುದಾನ ಮಂಜೂರು ಮಾಡಿದೆ.

ಶ್ರೀನಗರ: ಗುಂಡು ನಿರೋಧಕ (ಬುಲೆಟ್‌ಪ್ರೂಫ್‌) ಅತ್ಯಾಧುನಿಕ ವಾಹನ, ಬುಲೆಟ್‌ಪ್ರೂಫ್‌ ಜಾಕೆಟ್‌ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗಾಗಿ ಜಮ್ಮು ಕಾಶ್ಮೀರ ಪೊಲೀಸ್‌ ಇಲಾಖೆಗೆ ಕೇಂದ್ರ ಸರ್ಕಾರ  1000 ಕೋಟಿ ಅನುದಾನ ಮಂಜೂರು ಮಾಡಿದೆ.

‘ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಉಪಸ್ಥಿತಿಯಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಭದ್ರತೆ ಪರಿಶೀಲನಾ ಸಭೆಯಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಪೊಲೀಸ್‌ ಇಲಾಖೆಯನ್ನು ಆಧುನೀಕರಣಗೊಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕರ ಜೊತೆ ಸಂಘರ್ಷ ನಡೆದಾಗ ಸಂಭವಿಸಬಹುದಾದ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುವಂಥ ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರುವ, ಜಿಪಿಎಸ್‌ ವ್ಯವಸ್ಥೆಯನ್ನು ಹೊಂದಿರುವ 50 ಅತ್ಯಾಧುನಿಕ ವಾಹನಗಳನ್ನು ಆರಂಭದಲ್ಲಿ ಖರೀದಿಸಲಾಗುವುದು. ಜೊತೆಗೆ, ಸ್ವಯಂಚಾಲಿತ ರೈಫಲ್‌ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಗುಂಡುನಿರೋಧಕ ಜಾಕೆಟ್‌ಗಳನ್ನು ಸಹ ಪೊಲೀಸರಿಗೆ ಒದಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

‘ಪೊಲೀಸ್‌ ಸಿಬ್ಬಂದಿಯನ್ನು ಸಣ್ಣ ತಂಡಗಳಾಗಿ ವಿಂಗಡಿಸಿ, ರಾಜ್ಯದಿಂದ ಹೊರಗೆ ಕರೆದೊಯ್ದು ಅವರಿಗೆ ವಿಶೇಷ ತರಬೇತಿ ನೀಡಲು ಸಹ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ತರಬೇತಿಗಳನ್ನು ಜಮ್ಮು ಕಾಶ್ಮೀರದಲ್ಲೇ ನಡೆಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.